ಜಿಲ್ಲೆ

ಕೋಶಮಟ್ಟಂ ಫೈನಾನ್ಸ್‌ಗೆ ರೈತ ಸಂಘದ ಕಾರ್ಯಕರ್ತರ ಮುತ್ತಿಗೆ

ಕೆ.ಎಂ.ದೊಡ್ಡಿ: ಅಡಮಾನ ಮಾಡಿರುವ ಒಡವೆಗಳ ಮೇಲೆ ಅಧಿಕ ಪ್ರಮಾಣದಲ್ಲಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕೋಶಮಟ್ಟಂ ಫೈನಾನ್ಸ್ ಶಾಖೆಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ರೈತರೊಬ್ಬರ ಹತ್ತಿರ ಅಧಿಕ ಪ್ರಮಾಣದಲ್ಲಿ ಬಡ್ಡಿಗೆ ಬಡ್ಡಿ ವಸೂಲಿ ಹಾಗೂ ಅವಧಿಗೂ ಮುಂಚೆ ಒಡವೆಗಳನ್ನು ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಫೈನಾನ್ಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಮಾತನಾಡಿ, ರೈತರು ಮಧ್ಯಮ ವರ್ಗದವರ ಒಡವೆಗಳ ಮೇಲೆ ಅಧಿಕ ಪ್ರಮಾಣದಲ್ಲಿ ಬಡ್ಡಿ ದರವನ್ನು ವಿಧಿಸುವುದು ಹಾಗೂ ಬಡ್ಡಿಗೆ ಚಕ್ರಬಡ್ಡಿ ವಿಧಿಸುತ್ತಿರುವುದು ಹಾಗೂ ದೂರವಾಣಿ ಕರೆ ಮೂಲಕ ಕಿರುಕುಳ ನೀಡುತ್ತಿರುವ ಕ್ರಮವನ್ನು ಖಂಡಿಸಿದರು.

ಹೆಚ್ಚಿನ ಬಡ್ಡಿ ವಸೂಲಿ ಮಾಡಲು ಗ್ರಾಹಕರಿಗೆ ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡುತ್ತ ಗ್ರಾಹಕರನ್ನು ವಂಚಿಸುತ್ತಿದೆ. ಆರ್‌ಬಿಐ ವಿಧಿಸುವ ಬಡ್ಡಿ ದರದಲ್ಲಿ ಬಡ್ಡಿದರವನ್ನು ನಿಗದಿಪಡಿಸಬೇಕು, ನಿಮಗೆ ಇಷ್ಟಬಂದಂತೆ ದರ ನೀಡಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಬೇಕು ಹೆಚ್ಚಿನ ಹಣ ನೀಡುವ ಆಮಿಷವೊಡ್ಡಿ ಹೆಚ್ಚು ಬಡ್ಡಿಗೆ ವಸೂಲಿಗೆ ಇಳಿದಿರುವ ಕ್ರಮವನ್ನು ಫೈನಾನ್ಸ್ ಕಂಪನಿಯ ಶಾಖಾ ವ್ಯವಸ್ಥಾಪಕ ಓಹನ್ ಎದುರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು

ಜಿಲ್ಲಾ ಮುಖಂಡರಾದ ಸೊ.ಸಿ.ಪ್ರಕಾಶ್, ರಾಮಲಿಂಗೇಗೌಡ ತಾಲೂಕು ಘಟಕದ ಅಧ್ಯಕ್ಷರು ಪ್ರಭುಲಿಂಗ, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ರೈತ ಮುಖಂಡರಾದ ವೆಂಕಟೇಶ್, ಅಣ್ಣೂರು ಸಿದ್ದೇಗೌಡ, ಕುದುರೆಗುಂಡಿ ನಾಗರಾಜು, ಬೊಪ್ಪಸಮುದ್ರ ಮಲ್ಲೇಶ್, ಮೋಹನ್, ವಿನಯ್ ಮತ್ತಿತರರು ಪಾಲ್ಗೊಂಡಿದ್ದರು.