ಬೆಳಗಾವಿ: ಕರೊನಾ-19 ಸೋಂಕಿಗೆ ದೇಶಿಯವಾಗಿ ಸಿದ್ಧಪಡಿಸಿರುವ ‘ಕೋವ್ಯಾಕ್ಸಿನ್’ನ ಮಾನವರ ಮೇಲಿನ 3ನೇ ಹಂತದ ಪ್ರಯೋಗವು ಇಲ್ಲಿಯ ಜೀವನರೇಖಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ಗುರುವಾರ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾದರು.
3ನೇ ಹಂತದ ಪ್ರಯೋಗದ ಮೊದಲ ಡೋಸ್ ಪಡೆಯುವ ಮೂಲಕ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾದ ಮೊದಲ ಜನಪ್ರತಿನಿಧಿ ಎನಿಸಿಕೊಂಡರು.
ಬಳಿಕ ಮಾತನಾಡಿದ ಅವರು, ಜನಪ್ರತಿನಿಧಿಗಳು ಸಮಾಜಕ್ಕೆ ಕೊಡುಗೆ ನೀಡಬೇಕು. ಹೀಗಾಗಿ, ನಮ್ಮ ದೇಶದಲ್ಲಿ ಸಿದ್ಧವಾಗುತ್ತಿರುವ ಕೋವ್ಯಾಕ್ಸಿನ್ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಬರಬೇಕು ಎನ್ನುವ ದೃಷ್ಟಿಯಿಂದ ನಾನು ಕೋವ್ಯಾಕ್ಸಿನ್ ಪಡೆದಿದ್ದೇನೆ. ಜನರೂ ಸಹ ಕೋವ್ಯಾಕ್ಸಿನ್ ಪಡೆದು ಆರೋಗ್ಯವಂತರಾಗಿರಬೇಕು ಎಂದು ಸಲಹೆ ನೀಡಿದರು. ಜೀವನರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಬಾತೆ ಮಾತನಾಡಿ, 3ನೇ ಹಂತದ ಕೋವ್ಯಾಕ್ಸಿನ್ ಪ್ರಯೋಗದಲ್ಲಿ 1,900 ಜನರಿಗೆ ಮೊದಲ ಕೋವ್ಯಾಕ್ಸಿನ್ ಡೋಸ್ ನೀಡಲಾಗಿದೆ. ಯಾರಿಗೂ ಅಡ್ಡ ಪರಿಣಾಮಗಳಾಗಿಲ್ಲ. ಇವರಿಗೆ 28 ದಿನಗಳ ಬಳಿಕ ಮತ್ತೆ 2ನೇ ಕೋವ್ಯಾಕ್ಸಿನ್ ಡೋಸ್ ನೀಡಲಾಗುವುದು. ಇವರ ದೇಹದಲ್ಲಿ ಹೆಚ್ಚಾಗುವ ರೋಗ ನಿರೋಧಕ ಶಕ್ತಿ ಮಾಹಿತಿ ಸಂಗ್ರಹಿಸಿ ಐಸಿಎಂಆರ್‌ಗೆ ಕಳುಹಿಸಲಾಗುವುದು. ಇದಾದ ಬಳಿಕ 3-4 ತಿಂಗಳಲ್ಲಿ ಕೋವ್ಯಾಕ್ಸಿನ್ ಹೊರ ಬರುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 4, ಎರಡನೇ ಹಂತದಲ್ಲಿ 50 ಜನರಿಗೆ ಕೋವ್ಯಾಕ್ಸಿನ್ ಡೋಸ್ ನೀಡಲಾಗಿತ್ತು. ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ‘ವಿಜಯವಾಣಿ’ಗೆ ತಿಳಿಸಿದರು. ದೆಹಲಿಯ ಐಸಿಎಂಆರ್‌ನ ಸಂಶೋಧಕ ಡಾ. ಅಜಯ, ಎನ್.ಆರ್.ಲಾಥೂರ್, ರಾಜ್ಯ ಜವಳಿ ನಿಗಮದ ಉಪಾಧ್ಯಕ್ಷ ಗುಂಡು ಮಾಸ್ತಮರಡಿ ಇತರರಿದ್ದರು. ಸಾರ್ವಜನಿಕರು ಡೋಸ್ ಪಡೆದರು.