ಬೀದರ್: ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಸೋಮವಾರ ಕೋವಿಶೀಲ್ಡ್ ಲಸಿಕೆ ಪಡೆದರು. ನಗರದ ಮಂಗಲಪೇಟ್ ನಲ್ಲಿರುವ ಪೊಲೀಸ್ ಆರೋಗ್ಯ ಕೇಂದ್ರಕ್ಕೆ ಖುದ್ದು ತೆರಳಿ ಲಸಿಕೆ ಪಡೆಯುವ ಮೂಲಕ ಸರಳತೆ ಮೆರೆದರು. ಲಸಿಕೆ ನೀಡುವ ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಡಿಸಿ ಅವರಿಂದ ಮೊಬೈಲ್ ಸಂಖ್ಯೆ, ಆಧಾರ್ ಕಾಡ್೯ ಸಂಖ್ಯೆ ಸೇರಿದಂತೆ ಅಗತ್ಯ ವಿವರ ಪಡೆದರು. ನಂತರ ಡಿಸಿಯವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿ.ಜಿ. ರೆಡ್ಡಿ ಅವರು ಲಸಿಕೆ ನೀಡಿದರು.
ಈ ವೇಳೆ ಮಾತನಾಡಿದ ಡಿಸಿ ಅವರು, ಕೋವಿಶೀಲ್ಡ್ ಸುರಕ್ಷಿತ ಲಸಿಕೆ. ಭಯಪಡದೆ ಲಸಿಕೆ ಪಡೆಯುವಂತೆ ಕೋರಿದರು. ಕೋವಿಶೀಲ್ಡ್ ಲಸಿಕೆ ಬಗ್ಗೆ ಯಾರೂ ಯಾವುದೇ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ. ಅತ್ಯಂತ ಸುರಕ್ಷಿತವಾಗಿರುವ ಲಸಿಕೆ ಇದಾಗಿದೆ. ಈಗಾಗಲೇ ಗುರುತಿಸಿದ ಮಂಚೂಣಿಯಲ್ಲಿರುವ ಇಲಾಖೆಗಳ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು. ಎಲ್ಲರೂ ಕರೊನಾ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ಕೋವಿಡ್ ನಿಯಮ ಕಡ್ಡಾಯ ಪಾಲಿಸಬೇಕು.
ಡಾ. ವಿ.ಜಿ.ರೆಡ್ಡಿ ಮಾತನಾಡಿ, ಮೊದಲ ಹಂತದಲ್ಲಿ ಗುರುತಿಸಿರುವಂತಹ ಇಲಾಖೆಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೋವಿಶೀಲ್ಡ್ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮಣ ಜಾಧವ್, ಪೊಲೀಸ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನೀಲಕುಮಾರ ಚತುರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ ಇತರರಿದ್ದರು.