ಬೀದರ್: ಕರೊನಾ ಹಿನ್ನೆಲೆಯಲ್ಲಿ ಶುಶ್ರೂಷಾಧಿಕಾರಿ (ನಸ್೯)ಗಳಿಗೆ ಮಂಜೂರಾದ ರೂ. 5 ಸಾವಿರ ಕೋವಿಡ್ ಭತ್ಯೆಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘ ಆಗ್ರಹಿಸಿದೆ.
ಬುಧವಾರ ನಗರಕ್ಕೆ ಆಗಮಿಸಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ, ಆರೋಗ್ಯ ಇಲಾಖೆಯಲ್ಲೇ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಗೆ ಸೀಮಿತವಾಗಿ ಪಿಪಿಇ ಕಿಟ್ ಧರಿಸಿ ಕೋವಿಡ್ ಹೆಲ್ತ್ ಸೆಂಟರ್ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಶುಶ್ರೂಷಾಧಿಕಾರಿಗಳಿಗೆ ಮಾಸಿಕ 5 ಸಾವಿರ ರೂ.ಗಳನ್ನು 6 ತಿಂಗಳ ಅಥವಾ ಮುಂದಿನ ಆದೇಶದವರೆಗೆ ಮಂಜೂರಿ ಮಾಡಿ ಸರ್ಕಾರ ಕಳೆದ ಸೆ.24ರಂದು ಆದೇಶ ಹೊರಡಿಸಿದೆ. ಈ ಆದೇಶದ ಮೂರೂವರೆ ತಿಂಗಳು ಕಳೆದರೂ ವಿಶೇಷ ಭತ್ಯೆ ಬಿಡುಗಡೆ ಮಾಡಿಲ್ಲ ಎಂದು ಗಮನ ಸೆಳೆಯಲಾಗಿದೆ.
ವೈದ್ಯಾಧಿಕಾರಿ ವೃಂದದವರಿಗೆ ನೀಡುತ್ತಿರುವ ಮಾದರಿಯಲ್ಲಿ ಶುಶ್ರೂಷಾಧಿಕಾರಿಗಳಿಗೆ ವಿಶೇಷ ಭತ್ಯೆ ನೀಡಬೇಕು. ವಾರ್ಷಿಕ ಬರುವ 48 ರಿಂದ 52 ಪತ್ರಾಂಕಿತ ರಜೆಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ಪ್ರಸ್ತುತ ಪಡೆಯುತ್ತಿರುವ 15 ದಿನಗಳ ವಾರ್ಷಿಕ ವೇತನದ ಬದಲಾಗಿ 30 ದಿನಗಳ ವಾರ್ಷಿಕ ವೇತನವನ್ನು ಪೊಲೀಸ್ ಸಿಬ್ಬಂದಿ ಮಾದರಿಯಲ್ಲಿ ನೀಡಬೇಕು. ರಿಸ್ಕ್ ಅಲೋಯನ್ಸ್ (ಗಂಡಾಂತರ) ಭತ್ಯೆ ಮಾಸಿಕ 4 ಸಾವಿರ ರೂ. ನೀಡಬೇಕೆಂದು ಆಗ್ರಹಿಸಲಾಗಿದೆ.
ಶುಶ್ರೂಷಾಧಿಕಾರಿಗಳ ಆರ್ಥಿಕ ಸೌಲಭ್ಯಗಳುಳ್ಳ ಯಾವುದೇ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸದಿರುವುದು ದುರದೃಷ್ಟಕರ. ಈ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಗಂಡಾಂತರ ಭತ್ಯೆ ಸೇರಿದಂತೆ ಶುಶ್ರೂಷಾಧಿಕಾರಿಗಳ ಬೇಡಿಕೆ ಈಡೇರಿಸದಿದ್ದಲ್ಲಿ ಮುಷ್ಕರಕ್ಕೆ ಇಳಿಯುವುದು ಅನಿವಾರ್ಯ. ಶೀಘ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ಹೋರಾಟದ ಹೆಜ್ಜೆ ಇಡಲಾಗುವುದು.| ರಾಜಕುಮಾರ ಮಾಳಗೆಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ