ಜಿಲ್ಲೆ

ಕೋವಿಡ್ ನಂತರವೂ ಆರೋಗ್ಯ ಸೇವೆ, ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ಮಾಹಿತಿ

ಹೊಸಕೋಟೆ: ಕರೊನಾ ನಿಯಂತ್ರಣದ ಉದ್ದೇಶದಿಂದ ಹೊಸಕೋಟೆಯಲ್ಲಿ ಮೇಕ್‌ಶ್‌ಟಿ ಆಸ್ಪತ್ರೆ ತೆರೆಯಲಾಗಿದ್ದು, ಕೋವಿಡ್ ನಂತರವೂ ಇನ್ನಿತರ ಆರೋಗ್ಯ ಸೇವೆಗೆ ಈ ಆಸ್ಪತ್ರೆ ಬಳಕೆಯಾಗಲಿದೆ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಖಾತೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ಎಐಆರ್ ಬಡಾವಣೆಯಲ್ಲಿ ಮೇಕ್‌ಶ್‌ಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ತೆರೆಯಲಾಗಿದೆ ಎಂದರು. ಎರಡನೆ ಅಲೆ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಮೇಕ್ ಶ್‌ಟಿ ಆಸ್ಪತ್ರೆ ಆರಂಭವಾಗಿತ್ತು ಈಗ ಹೊಸಕೋಟೆಯಲ್ಲಿಯೂ ಕಾರ್ಯಾರಂಭ ಮಾಡಿದೆ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿ ಈಗಾಗಲೆ ನೂರಾರು ಹಾಸಿಗೆ ಸಿದ್ದಗೊಳಿಸಲಾಗಿದೆ ಎಂದರು. ಕರೊನಾ ಮೂರನೇ ಅಲೆಯಿಂದ ಹೆಚ್ಚಿನ ಅನಾಹುತವಿಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ 50 ಹಾಸಿಗೆಗಳ ಮೇಕ್ ಶ್‌ಟಿ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ ಎಂದರು.

ಮನೆ ಬಾಗಿಲಿಗೆ ವೈದ್ಯರು: ಹೊಸಕೋಟೆ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಈ ಆಸ್ಪತ್ರೆ ಸಹಕಾರಿಯಾಗಲಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಕಂಪನಿಗಳಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸಬೇಕು ಎಂದ ಅವರು, ಗ್ರಾಮಾಂತರ ಜಿಲ್ಲಾಡಳಿತ ಜಾರಿಗೆ ತಂದಿರುವ ’ವೈದ್ಯರ ನಡೆ-ಹಳ್ಳಿ ಕಡೆ’ ಕಾರ್ಯಕ್ರಮದಡಿ ವೈದ್ಯರೇ ಜನರ ಬಳಿಗೆ ತೆರಳಿ, ಆರೋಗ್ಯ ಪರೀಕ್ಷೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕೋವಿಡ್ ತಡೆಗಟ್ಟಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ, ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಸೋಂಕು ನಿಯಂತ್ರಣವಾಗುತ್ತಿದೆ ಎಂದರು.

ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ಮೂಲಕ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿ ಇನ್ನಿತರ ಸಿಬ್ಬಂದಿ ಶ್ರಮಿಸುತ್ತಿದ್ದಾರೆ, ಮೇಕ್ ಶ್‌ಟಿ ಆಸ್ಪತ್ರೆ ನಿರ್ಮಾಣದ ಯಶಸ್ಸಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪಾತ್ರ ಮುಖ್ಯವಾಗಿದೆ ಎಂದರು. ನಗರೋತ್ಥಾನ ಯೋಜನೆಯಡಿ ಹೊಸಕೋಟೆ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಕಾಮಗಾರಿಯಿಂದ ಹೊಸಕೋಟೆ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ದೂರಾಗಲಿದೆ ಎಂದು ತಿಳಿಸಿದರು.

50 ಹಾಸಿಗೆಯ ವಿಸ್ತರಿತ ಆಸ್ಪತ್ರೆಯ ಮುಂಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಏರ್ಪಡಿಸಲಾದ ಆರೋಗ್ಯ ಶಿಕ್ಷಣ ಕುರಿತ ವಸ್ತು ಪ್ರದರ್ಶನದಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಹೊಸಕೋಟೆ ನಗರದ ಗ್ಲೋಬಲ್ ಐ ಫೌಂಡೇಶನ್ ಹತ್ತಿರ, 44,000 ಚದರ ಅಡಿ ಪ್ರದೇಶದಲ್ಲಿ 6 ವಾರಗಳಲ್ಲಿ ಪೂರ್ಣಗೊಳಿಸಲಾದ ಆಸ್ಪತ್ರೆ 50 ಹಾಸಿಗೆಗಳನ್ನು ಹೊಂದಿದೆ. ಮೆಡಿಕ್ಯಾಬ್‌ನಲ್ಲಿ 7 ಕ್ಯಾಬಿನ್‌ಗಳಿದ್ದು, 1 ಕ್ಯಾಬಿನ್‌ನಲ್ಲಿ, 8 ವೆಂಟಿಲೇಟರ್ ಹಾಸಿಗೆಗಳ ಸೌಲಭ್ಯದೊಂದಿಗೆ 1 ಐಸಿಯು ವಾಡ್, ಮೂರು ಕ್ಯಾಬಿನ್‌ನಲ್ಲಿ 14 ಹಾಸಿಗೆಗಳುಳ್ಳ ಜನರಲ್ ವಾರ್ಡ್ ಎರಡು ಕ್ಯಾಬಿನ್‌ನಲ್ಲಿ ಪುರುಷ ಹಾಗೂ ಮಹಿಳಾ ಕರ್ತವ್ಯ ನಿರತ ವೈದ್ಯರ ಕೊಠಡಿ, ಒಂದು ಕ್ಯಾಬಿನ್‌ನಲ್ಲಿ ನರ್ಸಿಂಹ್ ಸ್ಟೇಷನ್ ಒಳಗೊಂಡಿದೆ ಎಂದು ಎಂಟಿಬಿ ಮಾಹಿತಿ ನೀಡಿದರು.

ನೀರಿನ ಸೌಲಭ್ಯ: 4.6 ಕೋಟಿ ರೂ.ವೆಚ್ಚದಲ್ಲಿ 8 ವೆಂಟಿಲೇಟರ್ ಸಹಿತ 50 ಹಾಸಿಗೆಗಳ ಆಸ್ಪತ್ರೆ ತೆರೆಯಲಾಗಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ತಿಳಿಸಿದರು. ಕುಡಿಯುವ ನೀರಿನ ಯೋಜನೆಯನ್ನು ಎಸ್‌ಸಿಪಿಟಿಎಸ್‌ಪಿ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲಾಗುವುದು, ನಗರದ ಬಾಲಾಜಿ ಬಡಾವಣೆಯಿಂದ ದಂಡುಪಾಳ್ಯದವರೆಗೆ ನೂತನ ಪೈಪ್ ಲೈನ್ ಅಳವಡಿಸಿ ಈ ಭಾಗದ ಜನರಿಗೆ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದರು.