ಜಿಲ್ಲೆ

ಕೋವಿಡ್ ನಂತರ ಹೃದಯಾಘಾತ ಪ್ರಮಾಣ ಶೇ.5 ಹೆಚ್ಚಳ: ಡಾ.ಸಿ.ಎನ್.ಮಂಜುನಾಥ್

ಮೈಸೂರು: ಬದಲಾದ ಜೀವನ ಶೈಲಿಯಿಂದಾಗಿ ಭಾರತೀಯರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಕೋವಿಡ್ ನಂತರ ಹೃದಯಾಘಾತ ಪ್ರಮಾಣ ಶೇ.5ರಷ್ಟು ಹೆಚ್ಚಾಗಿರುವುದು ಕಂಡುಬರುತ್ತಿದೆ. ಯುವಕರು, ಮಧ್ಯ ವಯಸ್ಕರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಇದೀಗ ಭಾರತದಲ್ಲಿ ಯುವಕರು ಹಾಗೂ ಮಧ್ಯ ವಯಸ್ಕರ ಹೃದಯ ಅಷ್ಟೊಂದು ಆರೋಗ್ಯಕರವಾಗಿಲ್ಲ. ಅದಕ್ಕೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯೂ ಕಾರಣವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಶೇ.35ರಷ್ಟು ಹೃದಯಾಘಾತ ಪ್ರಕರಣಗಳು 45 ವರ್ಷದೊಳಗಿನವರಲ್ಲೇ ಕಂಡುಬರುತ್ತಿವೆ ಎಂದರು.
ಆರು ವರ್ಷಗಳಲ್ಲಿ ಐದೂವರೆ ಸಾವಿರ ಹೃದ್ರೋಗಿಗಳಿಗೆ ನಮ್ಮ ಸಂಸ್ಥೆಯಿಂದ ಚಿಕಿತ್ಸೆ ನೀಡಿದ್ದೇವೆ. ಆದರೆ ಪ್ರತಿಷ್ಠಿತ ಕುಟುಂಬದ ವ್ಯಕ್ತಿಗಳು ಹೃದಯಾಘಾತದಿಂದ ಸಾವಿಗೀಡಾದಾಗ ಮಾತ್ರ ಅದು ಸುದ್ದಿಯಾಗುತ್ತದೆ ಎಂದರು.
ಹೃದಯಾಘಾತ ತಡೆಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಧೂಮಪಾನ, ಮದ್ಯಪಾನ ಮಾಡಬಾರದು. ತೂಕ, ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಫಾಸ್ಟ್‌ಫುಡ್, ಜಂಕ್‌ಫುಡ್ ಸೇವನೆ ಬೇಡ. ಮನೆಯಲ್ಲೇ ಮಾಡಿದ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಜಪಾನ್, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ಹೃದಯಾಘಾತ ಪ್ರಮಾಣ ಕಡಿಮೆ ಆಗುತ್ತಿದೆ. ಆದರೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ಜೀವನದ ಒತ್ತಡ, ಆತಂಕ ಮತ್ತು ಗಾಬರಿಗಳೇ ಈ ಸಮಸ್ಯೆಗೆ ಕಾರಣವಾಗಿವೆ. ವಾಯುಮಾಲಿನ್ಯ, ಅನುವಂಶೀಯ ಕಾರಣದಿಂದಲೂ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆ. ಅದಕ್ಕಾಗಿ 35 ವರ್ಷ ದಾಟಿದವರು ಪ್ರತಿವರ್ಷ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.