ಜಿಲ್ಲೆ

ಕೋವಿಡ್‌ ನಂತರ ಕಾಣದ ಪ್ಯಾಸೆಂಜರ್‌ ರೈಲು

ಯು.ಎಸ್.ಪಾಟೀಲ ದಾಂಡೇಲಿ
ಕೋವಿಡ್ ಕಾರಣದಿಂದ ಸ್ಥಗಿತವಾಗಿರುವ ಧಾರವಾಡ-ಅಂಬೇವಾಡಿ ಪ್ಯಾಸೆಂಜರ್ ರೈಲು ಓಡಾಟ ಮರು ಪ್ರಾರಂಭಕ್ಕೆ ನೈರುತ್ಯ ರೈಲ್ವೆ ಹಿಂದೇಟು ಹಾಕುತ್ತಿದೆ. ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ಕಾರಣವನ್ನು ರೈಲ್ವೆ ಇಲಾಖೆ ನೀಡುತ್ತಿದೆ.
2019 ನವೆಂಬರ್ 3 ರಂದು ದಾಂಡೇಲಿ-ಧಾರವಾಡ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅಂದಿನ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಹಸಿರು ನಿಶಾನೆ ತೋರಿದ್ದರು. ದಾಂಡೇಲಿಯಿAದ ಮಧ್ಯಾಹ್ನ 3 ಗಂಟೆಗೆ ಬಿಟ್ಟು, ಸಾಯಂಕಾಲ 4.40 ಕ್ಕೆ ರೈಲು ಧಾರವಾಡ ನಿಲ್ದಾಣ ತಲುಪುತ್ತಿತ್ತು. ಅಳ್ನಾವರ, ಕುಂಬಾರ ಗಣವಿ, ಮುಗದ್, ಕೆರಕೊಪ್ಪ ಮಾರ್ಗವಾಗಿ 3 ಬೋಗಿಯ ಡೀಸೆಲ್ ಇಂಜಿನ್ ರೈಲು(2 ಜನರಲ್, 1 ಸೆಕೆಂಡ್ ಕ್ಲಾಸ್ ಮತ್ತು ಒಂದು ಲಗೇಜ್ ಬೋಗಿ)ಓಡಾಡುತ್ತಿತ್ತು. ಆದರೆ, ನಾಲ್ಕು ತಿಂಗಳಾಗುವುದರೊಳಗೆ 2020 ರಲ್ಲಿ ಕರೊನಾ ಕಾರಣದಿಂದ ಪ್ಯಾಸೆಂಜರ್ ರೈಲು ಓಡಾಟ ಸ್ಥಗಿತವಾಗಿದ್ದು, ಮತ್ತೆ ಪ್ರಾರಂಭವೇ ಆಗಿಲ್ಲ.
ಐತಿಹಾಸಿಕ ಮಾರ್ಗ:
ದಾಂಡೇಲಿಗೆ ಶತಮಾನದ ಹಿಂದೆಯೇ ರೈಲ್ವೆ ಸಂಪರ್ಕ ಸಿಕ್ಕಿತ್ತು. ಆದರೆ, ಪ್ಯಾಸೆಂಜರ್ ರೈಲು ಓಡಾಡಿದ್ದಿಲ್ಲ. ಬ್ರೀಟಿಷರು 1917 ರಲ್ಲಿ ಮೀಟರ್‌ಗೇಜ್ ರೈಲ್ವೇ ಹಳಿಯನ್ನು ಇಲ್ಲಿ ಅಳವಡಿಸಿದ್ದರು. ದಾಂಡೇಲಿಯ ಅರಣ್ಯದ ಕಟ್ಟಿಗೆ, ಬಾಂಬು, ಮ್ಯಾಂಗನಿಸ್ ಗಣಿಗಾರಿಕೆಗಾಗಿ ಈ ರೈಲ್ವೇ ಮಾರ್ಗವನ್ನು ಬಳಸಲಾಗುತ್ತಿತ್ತು. 1994 ರಲ್ಲಿ 40ಕೋಟಿ ರೂ ವೆಚ್ಚದಲ್ಲಿ ಈ ರೈಲು ಮಾರ್ಗವನ್ನು ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತನೆ ಮಾಡಲಾಗಿತ್ತು. 1995ರ ಜುಲೈ 7 ರಿಂದ ಅಳ್ನಾವರ, ಅಂಬೇವಾಡಿ 25 ಕಿಮೀ ಸರಕು ಸಾಗಣೆ ರೈಲು ಆರಂಭಿಸಲಾಯಿತು. ಆದರೆ, ಪ್ಯಾಸೆಂಜರ್ ರೈಲು ಮಾತ್ರ ಬರುತ್ತಿರಲಿಲ್ಲ. ಆಗಿನ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ವಿಶೇಷ ಆಸಕ್ತಿ ತೋರಿ ಅಂಬೇವಾಡಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿದ್ದರು.
ಸದ್ಯ ಅಂಬೇವಾಡಿವರೆಗೆ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ನಿಲ್ದಾಣದ ಕಚೇರಿಯ ಭಾಗದಲ್ಲಿ ಕಚೇರಿ ಭಾಗದಲ್ಲಿ 300 ಮೀಟರ್ ಹಾಗೂ ಎದುರಿನಲ್ಲಿ 240 ಮೀ. ಪ್ಲಾಟ್‌ಫಾರ್ಮ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗೂಡ್ಸ್ ರೈಲುಗಳು ಆಗಾಗ ಓಡಾಡುತ್ತಿವೆ. ಆದರೆ, ಪ್ಯಾಸೆಂಜರ್ ರೈಲು ಬರುವುದು ಮಾತ್ರ ಖಚಿತವಿಲ್ಲ.

........
ದಾಂಡೇಲಿ ಮತ್ತು ಜೊಯಿಡಾ ಪ್ರವಾಸೋದ್ಯಮದ ಭವಿಷ್ಯ ಉಜ್ವಲವಾಗಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪ್ರವಾಸಿಗರು ಇಲ್ಲಿಗೆ ಹೆಚ್ಚಿನಸಂಖ್ಯೆಲ್ಲಿ ಬರುತ್ತಿದ್ದಾರೆ. ಮುಂಬೈ, ಪುಣೆ, ಬೆಂಗಳೂರು ಮುಂತಾದ ಮಹಾ ನಗರಗಳಿಂದ ದಾಂಡೇಲಿಗೆ ನೇರವಾಗಿ ರೈಲು ಸಂಪರ್ಕ ಕಲ್ಪಿಸಬೇಕು. ಇದರಿಂದ ದಾಂಡೇಲಿ, ಜೊಯಿಡಾ ಭಾಗದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕನಸಿನ ಕೂಸಾದ ಗ್ಲೊಲ್ಡನ್ ಚಾರಿಯಟ್ ಪ್ರವಾಸೋದ್ಯಮದ ಆಶಾದಾಯಕ ರೈಲು ದಾಂಡೇಲಿಗೆ ಆಗಮಿಸುವಂತೆ ಮಾಡಬೇಕಾಗಿದೆ.
ಓಂಕಾರ ಉಮೇಶ
ಪ್ರವಾಸೋದ್ಯಮಿ
ದಾಂಡೇಲಿ

…………

ಈ ಹಿಂದೆ ಪ್ರಾರಂಭವಾಗಿ, ಕೋವಿಡ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಧಾರವಾಡ-ಅಂಬೆವಾಡಿ ಪ್ಯಾಸೆಂಜರ್ ರೈಲು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಮರು ಪ್ರಾರಂಭ ಮಾಡಿಲ್ಲ. ಜನರ ಬೇಡಿಕೆ ಬಂದಲ್ಲಿ ಮತ್ತೆ ಪ್ರಾರಂಭಿಸಲಾಗುವುದು.
ಅನೀಸ್ ಹೆಗಡೆ
ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ