ಜಿಲ್ಲೆ

ಕೋವಿಡ್ ಕಿಟ್‌ನಲ್ಲಿ ಅನಗತ್ಯ ಔಷಧ

ವೇಣುವಿನೋದ್ ಕೆ.ಎಸ್. ಮಂಗಳೂರು
ಕೋವಿಡ್ ಬಾಧಿತರಿಗೆ ಅನಗತ್ಯವಾಗಿ ನೀಡಲಾಗುವ ಆ್ಯಂಟಿಬಯಾಟಿಕ್, ಸ್ಟಿರಾಯ್ಡಿ ಸಹಿತ ಔಷಧಗಳಿಂದ ಸಮಸ್ಯೆಯಾಗುತ್ತಿದೆಯೇ?
ವೈದ್ಯಕೀಯ ಲೋಕದಲ್ಲಿ ಹೀಗೊಂದು ಜಿಜ್ಞಾಸೆ ಈಗ ಶುರುವಾಗಿದೆ. ಕೆಲವು ವೈದ್ಯಕೀಯ ತಜ್ಞರ ಪ್ರಕಾರ ಕೋವಿಡ್ ಪಾಸಿಟಿವ್ ಬಂದ ಕೂಡಲೆ ಮನೆಯಲ್ಲಿ ಐಸೋಲೇಶನ್‌ನಲ್ಲಿರುವವರಿಗೆ ಅನಗತ್ಯವಾಗಿ ಹಲವು ರೀತಿಯ ಔಷಧಗಳನ್ನು ನೀಡಲಾಗುತ್ತದೆ. ವಾಸ್ತವವಾಗಿ ಅವುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿಲ್ಲ. ಹಾಗಿದ್ದರೂ ರಾಜ್ಯದ ಆರೋಗ್ಯ ಟಾಸ್ಕ್‌ಫೋರ್ಸ್ ಇವುಗಳನ್ನು ನಿಗದಿ ಪಡಿಸಿದೆ.

ಕರೊನಾ ಆರಂಭದಿಂದ ಮಧ್ಯಮ ಹಂತದವರೆಗೆ ಇರುವವರೆಲ್ಲರಿಗೂ ಇದೇ ಔಷಧಗಳನ್ನು ನೀಡಲಾಗುತ್ತಿದೆ. ಅವರ ಸ್ಥಿತಿ ಬಿಗಡಾಯಿಸುವಾಗ ರೆಮ್‌ಡಿಸಿವಿರ್‌ನಂತಹ ಹೈಪವರ್ ಆ್ಯಂಟಿಬಯಾಟಿಕ್ ನೀಡಲಾಗುತ್ತದೆ. ಇಂತಹ ಔಷಧ ನೀಡಬೇಕು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ.
ಇದರಿಂದಾಗಿ ಜನರು, ‘ಹೇಗೂ ಔಷಧ ಇದೆ, ನಮಗೇನೂ ಆಗುವುದಿಲ್ಲ’ ಎಂಬ ಅಭಿಪ್ರಾಯಕ್ಕೆ ಬಂದು ತಡವಾಗಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಹೋಗುತ್ತಾರೆ. ಇದು ಕೋವಿಡ್ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗುವುದಕ್ಕೆ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು.

ಸದ್ಯ ಕೋವಿಡ್ ರೋಗಿಗಳಿಗೆ ಐವರ್‌ಮೆಕ್ಟಿನ್, ಡಾಕ್ಸಿಸೈಕ್ಲಿನ್, ಅಝಿತ್ರೊಮೈಸಿನ್ ಮುಂತಾದ ಆಂಟಿಬಯಾಟಿಕ್, ಸ್ಟಿರಾಯ್ಡಿಗಳನ್ನು ನೀಡಲಾಗುತ್ತಿದೆ. ಸರ್ಕಾರ ನೀಡುವ ಕಿಟ್‌ನಲ್ಲಿ ಏನೇನಿದೆ ಎನ್ನುವುದನ್ನು ತಿಳಿದಿರುವ ಜನರೇ ಸ್ವತಃ ಮೆಡಿಕಲ್‌ಗಳಿಂದ ಖರೀದಿಸುವುದೂ ಇದೆ. ವಾಸ್ತವವಾಗಿ ಇವುಗಳ ಅಗತ್ಯವಿಲ್ಲ.

ಬಹುತೇಕ ರೋಗಿಗಳ ದೇಹದಲ್ಲಿ ಪ್ರತಿಕಾಯಗಳ ಸೃಷ್ಟಿಯಾಗುತ್ತಲೇ ವೈರಸ್ ಇನ್ನಿಲ್ಲವಾಗುತ್ತದೆ.
ಸದ್ಯ ಕೋವಿಡ್‌ಗೆ ಇದಮಿತ್ಥಂ ಎಂಬ ಚಿಕಿತ್ಸೆಯಿಲ್ಲ. ರಾಜ್ಯದಲ್ಲಿ ಸದ್ಯ ಕೋವಿಡ್ ಟಾಸ್ಕ್‌ಫೋರ್ಸ್ ಸೂಚಿಸಿರುವಂತೆ ಈ ಔಷಧಗಳನ್ನು ನೀಡಲಾಗುತ್ತಿದೆ. ಐಸಿಎಂಆರ್, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆಗಳು ತಮ್ಮದೇ ಆದ ಕೋವಿಡ್ ಚಿಕಿತ್ಸಾ ವಿಧಾನಗಳನ್ನು ಹೇಳಿವೆ.

ಬೇಕಾಬಿಟ್ಟಿ ಬಳಕೆ ಅಪಾಯಕ್ಕೆ ಆಹ್ವಾನ: ಹೆಚ್ಚು ಸಮಸ್ಯೆಯಿಲ್ಲದ ಸರಳ ಕೋವಿಡ್‌ನಲ್ಲಿ ಆ್ಯಂಟಿಬಯಾಟಿಕ್ ಅಗತ್ಯವೇ ಇಲ್ಲ. ಆ್ಯಂಟಿಬಯಾಟಿಕ್‌ಗಳಿಂದ ದೇಹದ ಇಮ್ಯುನಿಟಿ ಕಡಿಮೆಯಾಗುತ್ತದೆ. ಆ್ಯಂಟಿಬಯಾಟಿಕ್, ಸ್ಟಿರಾಯ್ಡಿಗಳ ಅತಿಯಾದ ಬಳಕೆಯಿಂದ ಶಿಲೀಂಧ್ರಗಳ ಸೋಂಕು (ಉದಾ: ಬ್ಲಾೃಕ್ ಫಂಗಸ್) ಕೂಡ ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ಸಕ್ಕರೆ ರೋಗ, ಕಿಡ್ನಿ ಸಮಸ್ಯೆ ಇರುವವರಿಗೆ ಅಂತಹ ಔಷಧ ನೀಡಿದರೆ ಅವರು ಕೋವಿಡ್ ಬದಲಿಗೆ ಆ ಔಷಧದ ಅಡ್ಡ ಪರಿಣಾಮದಿಂದ ಸಾಯುವ ಸಂಭವವೂ ಇದೆ.

ರಾಜ್ಯದ ಕೋವಿಡ್ ಟಾಸ್ಕ್‌ಫೋರ್ಸ್ ಶಿಫಾರಸಿನಂತೆ ಈಗ ಕೋವಿಡ್ ರೋಗಿಗಳಿಗೆ ಔಷಧ ನೀಡಲಾಗುತ್ತಿದೆ. ಅದರಲ್ಲಿರುವ ಅನೇಕ ಔಷಧಗಳು ಎಷ್ಟರ ಮಟ್ಟಿಗೆ ಅಗತ್ಯ ಎನ್ನುವುದು ಸದ್ಯ ಚರ್ಚೆಯಲ್ಲಿದೆ. ಟಾಸ್ಕ್‌ಫೋರ್ಸ್‌ನವರೇ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು, ಯಾವಾಗಲೂ ಚಿಕಿತ್ಸಾ ವಿಧಾನ ಉತ್ತಮ ಪಡಿಸಿಕೊಳ್ಳಲು ಅವಕಾಶಗಳಿವೆ.
- ಡಾ.ಚಕ್ರಪಾಣಿ, ಹಿರಿಯ ವೈದ್ಯರು, ಮಂಗಳೂರು 
.............
ಟಾಸ್ಕ್‌ಫೋರ್ಸ್ ಇಂತಹ ‘ಪಾಲಿಫಾರ್ಮಸಿ’(ಹಲವು ಔಷಧಗಳನ್ನು ನೀಡುವುದು) ಸಲಹೆ ನೀಡುವುದನ್ನು ಸ್ಥಗಿತಗೊಳಿಸಿ ರೋಗಿಗಳಿಗೆ ಕೇವಲ ಪ್ಯಾರಾಸಿಟಮಾಲ್ ನೀಡಿದರೆ ಸಾಕು. ಇದರಿಂದ ಶೇ.80ರಷ್ಟು ಮಂದಿ ಚೇತರಿಸಿಕೊಳ್ಳುತ್ತಾರೆ.
-ಡಾ.ಶಾಂತಾರಾಮ ಬಾಳಿಗ, ಸಮುದಾಯ ಆರೋಗ್ಯ ತಜ್ಞರು 
..............
ರೋಗಿಗಳು ಅವರೇ ಹೋಗಿ ಆ್ಯಂಟಿಬಯಾಟಿಕ್ಸ್, ಸ್ಟಿರಾಯ್ಡಿ ಔಷಧ ತೆಗೆದುಕೊಳ್ಳಲೇಬಾರದು. ಹಾಗೆ ಮಾಡಿದರೆ ಅವರ ದೇಹದಲ್ಲಿ ಪ್ರತಿಕಾಯಗಳ ಸೃಷ್ಟಿಯೇ ನಿಂತು ದೊಡ್ಡ ಸಮಸ್ಯೆಯಾಗುತ್ತದೆ. ಸರ್ಕಾರದ ವ್ಯವಸ್ಥೆ ಮೇಲಿನ ಒತ್ತಡದಿಂದ ಈಗ ಪಾಲಿಫಾರ್ಮಸಿ ಆಗಿರಬಹುದು. ಇದರನ್ನು ಮೆಡಿಕಲ್ ಕಾಲೇಜುಗಳಲ್ಲಿ ನಿಯಂತ್ರಿಸುವುದು ಸಾಧ್ಯವಿದೆ.
-ಡಾ.ಸಂದೀಪ್ ರೈ, ವೈದ್ಯರು, ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆ, ದೇರಳಕಟ್ಟೆ