ಬೆಳಗಾವಿ: ಸಂಭವನೀಯ ಕರೊನಾ 3ನೇ ಅಲೆ ತಡೆಯಲು ಎಲ್ಲರೂ ಸನ್ನದ್ಧರಾಗಬೇಕು ಎಂದು ಭಾರತೀಯ ಜೈನ ಸಂಘಟನೆ ಸಂಸ್ಥಾಪಕ ಶಾಂತಿಲಾಲ ಎಂ. ಹೇಳಿದ್ದಾರೆ.
ನಗರದ ರೂಪಾಲಿ ಕನ್ವೇಷನ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕರೊನಾ ಮುಕ್ತ ಗ್ರಾಮ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್‌ನ ಎರಡೂ ಅಲೆಗಳಿಂದ ಜನರು ತತ್ತರಿಸಿದ್ದಾರೆ. ಲಸಿಕೆಯ ಪರಿಣಾಮದಿಂದ ಕರೊನಾ ಹತೋಟಿಗೆ ಬಂದಿದೆ. ತಜ್ಞರ ಪ್ರಕಾರ 3ನೇ ಅಲೆ ಮಕ್ಕಳ ಮೇಲೆ ಮತ್ತು ಗ್ರಾಮೀಣ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ಭಾರತೀಯ ಜೈನ ಸಂಘಟನೆ ಸರ್ಕಾರದೊಂದಿಗೆ ಕೈಜೋಡಿಸಿ ಕೋವಿಡ್ ಮುಕ್ತ ಗ್ರಾಮಕ್ಕಾಗಿ ನಿರ್ದಿಷ್ಟ ಯೋಜನೆಯೊಂದಿಗೆ ಕಾರ್ಯನಿರ್ವಹಿಸಲು ಮುಂದಾಗಿದೆ ಎಂದರು.
ಈ ಯೋಜನೆ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ ಆರೋಗ್ಯ ಇಲಾಖೆ, ಎನ್‌ಎಸ್‌ಎಸ್, ಎನ್‌ಸಿಸಿ ತಂಡಗಳು ಗ್ರಾಮ ಅಭಿವೃದ್ಧಿ ತಂಡಗಳು, ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನಿತರ ಸಾಮಾಜಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮೂಲಕ ಅಭಿಯಾನ ನಡೆಸಲಾಗುತ್ತಿದೆ. ಈ ಯೋಜನೆಯನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕದ ಜೈನ್ ಗ್ರುಪ್ ಆಫ್ ಇನ್‌ಸ್ಟಿಟ್ಯೂಟ್ ಮತ್ತು ಬೆಳಗಾವಿ ಭರತೇಶ ಶಿಕ್ಷಣ ಸಂಸ್ಥೆಗಳ ಜತೆ ಒಪ್ಪಂದ ಮಾಡಕೊಳ್ಳಲಾಗಿದೆ ಎಂದರು.
ಭಾರತೀಯ ಜೈನ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲುಂಕರ, ರಾಜ್ಯ ಘಟಕದ ಅಧ್ಯಕ್ಷ ಮಹಾವೀರಚಂದ ಪಾರೇಖ, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು.
ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ, ಭಾರತೀಯ ಜೈನಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಗೌತಮ ಭಾಪನಾ, ವಿಭಾಗೀಯ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ, ಬೆಳಗಾವಿ ಘಟಕದ ಅಧ್ಯಕ್ಷ ಹೀರಾಚಂದ ಕಲಮನಿ, ಅಭಿಯಾನ ಯೋಜನಾ ವಿಭಾಗದ ಮುಖ್ಯಸ್ಥ ದಿನೇಶ ಪಾಲರೇಚಾ, ಭರತೇಶ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಮತ್ತಿತರರು ಇದ್ದರು.
ಬೆಳಗಾವಿ ವಿಭಾಗದ ಅಧ್ಯಕ್ಷ ವಿನೋದ ದೊಡ್ಡಣ್ಣವರ ಸ್ವಾಗತಿಸಿದರು. ಮಿಥುನ ಶಾಸ್ತ್ರೀ ಮತ್ತು ಸ್ವಾತಿ ಜೋಗ ನಿರೂಪಿಸಿದರು. ಅರುಣ
ಯಲಗುದ್ರಿ ವಂದಿಸಿದರು. ಇದೇ ವೇಳೆ ‘ಕೋವಿಡ್ ಮುಕ್ತ’ ಗ್ರಾಮ ಅಭಿಯಾನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜೈನ ಸಂಘಟನೆ ಮತ್ತು ಭರತೇಶ ಶಿಕ್ಷಣ ಸಂಸ್ಥೆಗಳ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.