ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಕೋವಿಡ್-19 ಕ್ಷಿಪ್ರ ಪರೀಕ್ಷೆ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಆರಂಭಿಸಿದ ಮೊದಲ ಖಾಸಗಿ ಆಸ್ಪತ್ರೆ ಇದಾಗಿದೆ.
ಕೋವಿಡ್-19 ರೋಗದ ವಿರುದ್ಧ ಭಾರತ ನಡೆಸುತ್ತಿರುವ ಒಗ್ಗಟ್ಟಿನ ಹೋರಾಟದಲ್ಲಿ ನಮ್ಮದೂ ಮಹತ್ವದ ಪಾಲುದಾರಿಕೆ ಮತ್ತು ಜವಾಬ್ದಾರಿ ಇದೆ ಎಂದು ಭಾವಿಸಲಾಗಿದೆ. ರೋಗ ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮ ಬೆಂಬಲಿಸುವುದರ ಜತೆಗೆ ಗುರುವಾರದಿಂದ ಆಸ್ಪತ್ರೆಗೆ ದಾಖಲಾಗುವ ಎಲ್ಲ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್-19 ಕ್ಷಿಪ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಕೋವಿಡ್-19 ಭಯಾನಕ ರೋಗವು ಎಲ್ಲೆಡೆ ಹರಡುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸುರಕ್ಷತೆ ಖಾತ್ರಿಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಈ ಕಾರಣದಿಂದಲೇ ಆಸ್ಪತ್ರೆಗೆ ದಾಖಲಾಗುವ ಎಲ್ಲ ರೋಗಿಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ. ಈ ಪ್ರದೇಶದಲ್ಲಿ ಕೋವಿಡ್-19 ಕ್ಷಿಪ್ರ ಪರೀಕ್ಷೆ ಪ್ರಾರಂಭಿಸಕಿರುವ ಮೊದಲ ಆಸ್ಪತ್ರೆ ನಮ್ಮದಾಗಿದೆ ಎಂದು ಹೇಳಿದ್ದಾರೆ.
ಕೋವಿಡ್-19 ಕ್ಷಿಪ್ರ ಪರೀಕ್ಷಾ ಕಿಟ್ಗಳನ್ನು ದಕ್ಷಿಣ ಕೋರಿಯಾದಿಂದ ತರಿಸಲಾಗಿದ್ದು, ಇದರ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನಮೋದನೆ ನೀಡಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ಮತ್ತು ಅಮೆರಿಕದ ಸಂಯುಕ್ತ ಸರ್ಕಾರಗಳು ಜನಸಮೂಹ ತಪಾಸಣೆಗಾಗಿ ಈ ಕಿಟ್ಗಳನ್ನು ವ್ಯಾಪಕವಾಗಿ ಬಳಕೆ ಮಾಡುತ್ತಿವೆ.
ರೋಗ ಲಕ್ಷಣಗಳು ಇರುವ ಮತ್ತು ಇಲ್ಲದಿರುವ ಸಂಭಾವ್ಯ ಕೋವಿಡ್-19 ರೋಗಿಗಳನ್ನು ಗುರುತಿಸುವುದಕ್ಕೆ ಈ ಪರೀಕ್ಷೆ ನೆರವಾಗಲಿದೆ. ಈ ಪರೀಕ್ಷೆ ಕೇವಲ ತಪಾಸಣೆಯಾಗಿದ್ದು, ಇದರಲ್ಲಿ ಪಾಸಿಟಿವ್ ಬಂದರೆ ಅದನ್ನು ಸರ್ಕಾರ ತನ್ನ ಅಧೀನ ಆರೋಗ್ಯ ಸಂಸ್ಥೆಗಳ ಮೂಲಕ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ ದೃಢಪಡಿಸಲಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಕೋವಿಡ್-19 ರ್ಯಾಪಿಡ್ ಟೆಸ್ಟ್ ಮೂಲಕ ಸೋಂಕು ಸಂಭಾವ್ಯ ಮಾಹಿತಿ ಪಡೆಯಲಾಗುತ್ತಿದೆ. ಈ ಮೂಲಕ ಆಸ್ಪತ್ರೆಯ ಇತರೆ ರೋಗಿಗಳಲ್ಲಿನ ಭಯ ನಿವಾರಣೆಯೂ ಸಾಧ್ಯವಾಗಲಿದೆ. ಹಾಗೊಂದು ವೇಳೆ ಪಾಸಿಟಿವ್ ಬಂದಲ್ಲಿ ಸಕರ್ಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡುವ ಮೂಲಕ ದೃಢಪಡಿಸಲಾಗುತ್ತದೆ. ಈ ಟೆಸ್ಟ್ ಪ್ರಾರಂಭಿಸಿದ ಮೊದಲ ಆಸ್ಪತ್ರೆ ನಮ್ಮದಾಗಿದೆ ಎಂಬು ಹೆಮ್ಮೆ ಇದೆ.
ಡಾ.ವಿಕ್ರಮ ಸಿದ್ದಾರೆಡ್ಡಿ,
ಮುಖ್ಯಸ್ಥ, ಯುನೈಟೆಡ್ ಆಸ್ಪತ್ರೆ ಕಲಬುರಗಿ.