ಬೇಲೂರು: ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಪುಟ್ಟಸ್ವಾಮಿ ಅವರ ಜಾಗದಲ್ಲಿ ಪುರಸಭೆಯಿಂದ ಕೋಳಿ ಅಂಗಡಿಗಳನ್ನು ತೆರೆಯದಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗರು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಸ್ಥಳೀಯ ನಿವಾಸಿ ಪುಟ್ಟಸ್ವಾಮಿಗೌಡ ಮಾತನಾಡಿ, ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗ ವಸತಿ ಪ್ರದೇಶವಾಗಿದ್ದು ಯಾವುದೇ ವಾಣಿಜ್ಯ ಉದ್ದಿಮೆ ತೆರೆಯಲು ಕಾನೂನಿನಡಿ ಅವಕಾಶವಿರುವುದಿಲ್ಲ. ಪುರಸಭೆಯಿಂದ 30 ರಿಂದ 35 ಕೋಳಿ ಮಾಂಸದ ಅಂಗಡಿಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಂಗಡಿಗಳನ್ನು ತೆರೆದಿದ್ದೆ ಆದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ತ್ಯಾಜ್ಯದ ವಾಸನೆ ಜತೆಗೆ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಅಲ್ಲದೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲಿದೆ. ಹಾಗಾಗಿ ಯಾವುದೆ ಕಾರಣಕ್ಕೂ ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಕೋಳಿ ಅಂಗಡಿಗಳು ಸೇರಿದಂತೆ ಯಾವುದೇ ಮಾಂಸ ಮಾರಾಟಕ್ಕೂ ಅವಕಾಶ ನೀಡಬಾರದು. ತೆರೆದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಪಟ್ಟಣದಲ್ಲಿರುವ ಎಲ್ಲ ಕೋಳಿ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಆದರೆ, ಇಂತಹದ್ದೆ ಸ್ಥಳ ಎಂದು ನಿಗದಿಯಾಗಿಲ್ಲ. ಈ ವಿಚಾರವಾಗಿ ಅಧಿಕಾರಿ ಮತ್ತು ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಸ್ಥಳೀಯರಾದ ಅನಿಲ್, ಅನುಷಾ, ಸಿದ್ಧಿಕಿ, ಗುಲ್ಜರ್, ಗಂಗಮ್ಮ ಇತರರಿದ್ದರು.