ಮೈಸೂರು: ನಗರದ ಕಂಸಾಳೆ ಕಲಾವಿದ ಕುಮಾರಸ್ವಾಮಿ(73) ಸೋಮವಾರ ನಿಧನರಾದರು.
ಇವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಮಹಾದೇವ, ಇಬ್ಬರು ಪುತ್ರಿಯರು ಇದ್ದಾರೆ. ನ.26ರಂದು ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಕಂಸಾಳೆ ಮಹಾದೇವಯ್ಯ ಅವರ ಪುತ್ರ ಕುಮಾರಸ್ವಾಮಿ ಅವರು 1951ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿದ್ದರು. 7ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಅವರು, 9ನೇ ವರ್ಷಕ್ಕೆ ತಂದೆಯಿಂದ ಕಂಸಾಳೆ ಕಲೆ ಕಲಿತರು. ಈ ಮೂಲಕ ಬಾಲ್ಯದಿಂದಲೇ ತಂದೆ ಜತೆಗೆ ಕಂಸಾಳೆಯನ್ನು ಮೈಗೂಡಿಸಿಕೊಂಡರು.
ದೆಹಲಿ, ಚೆನ್ನೈ, ಕೇರಳ, ಕೋಲ್ಕತ್ತ ಹಾಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ, ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಂಸಾಳೆ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈವರೆಗೂ ಸಾವಿರಾರು ಮಕ್ಕಳಿಗೆ ಕಂಸಾಳೆ ಕಲೆಯನ್ನು ಹೇಳಿಕೊಟ್ಟಿದ್ದರು.
ನಟ ಶಿವರಾಜ್‌ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ ಕೋಲುಮಂಡೆ ಹಾಡಿನ ಕಂಸಾಳೆ ಸಂಗೀತದ ನೃತ್ಯ ಸಂಯೋಜನೆ ಮಾಡಿ ಹೆಸರುವಾಸಿಯಾಗಿದ್ದರು. ಕರ್ನಾಟಕ ಜಾನಪದ ಅಕಾಡೆಮಿಯಿಂದ 2020ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದರು. ಜತೆಗೆ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.