ಕಲಬುರಗಿ: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಫೆ.೨೫ರಂದು ನಡೆಯಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗೆ ಹಕ್ಕೊತ್ತಾಯ ಮಂಡಿಸಲು ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಮಾವೇಶ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದರು.
ನಗರದ ಗಂಗಾ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಅಂಬಿಗರ ಚೌಡಯ್ಯ ಜೀಣೋದ್ಧಾರ ಸಂಘ, ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್, ಕರ್ನಾಟಕ ಕೋಲಿ ಸೈನ್ಯ, ಅಂಬಿಗರ ಸೇವಾ ದಳ, ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ, ಮಾಣಿಕೇಶ್ವರಿ ಕಾಲನಿ ಚೌಡಯ್ಯ ಸ್ನೇಹಿತರ ಬಳಗ ಸೇರಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಸಮಾವೇಶಕ್ಕೆ ಹೆಚ್ಚಿನ ಸಮಾಜ ಬಾಂಧವರನ್ನು ಕರೆದುಕೊಂಡು ಬರಲು ನಿರ್ಣಯಿಸಿದರು.
ಮುಖಂಡರಾದ ಬಸವರಾಜ ಹರವಾಳ, ರಮೇಶ ನಾಟಿಕರ ಮಾತನಾಡಿ, ರಾಜ್ಯ ಸಮಾವೇಶಕ್ಕೆ ಪಕ್ಷಭೇದ ಮರೆತು ಸಮಾಜದವರು ಭಾಗವಹಿಸಬೇಕು. ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬರುವ ದಿನ ಅವರ ಗಮನ ಸೆಳೆಯಲು ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಸಮಾವೇಶ ಏಕಪಕ್ಷೀಯ ನಿರ್ಣಯವಲ್ಲ. ಬೇರೆ ಉದ್ದೇಶವಿರಲಿಲ್ಲ. ಮುಂದಿನ ದಿನದಲ್ಲಿ ಎಲ್ಲರ ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದರೂ, ಕೆಲ ಮುಖಂಡರು ಖಂಡನೆ, ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ಫೆ.9ರಂದು ಸಮಾವೇಶದ ರೂಪುರೇಷೆ ಕುರಿತು ಚರ್ಚಿಸಲು ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಪೂರ್ವಭಾವಿ ಸಣೆ ಕರೆದಿದ್ದು, ಆಗಮಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಂತೋಷ ಬೆಣ್ಣೂರ, ನಿಂಗಪ್ಪ ಕುಳಕುಮಟಗಿ, ಶಿವಕುಮಾರ ಹೊನಗುಂಟಿ ಮಾತನಾಡಿ, ಪ್ರಶ್ನಿಸುವುದಕ್ಕಿಂತ ಸಲಹೆ ನೀಡಿದರೆ ಅದನ್ನು ತಿಪ್ಪಣ್ಣಪ್ಪ ಸ್ವೀಕರಿಸಿ ಮುಂದಡಿ ಇಡಲಿದ್ದಾರೆ ಎಂದರು.
ಅರ್ಜುನ ಜಮಾದಾರ, ಶ್ರೀಕಾಂತ ಆಲೂರು ಮಾತನಾಡಿ, ಸಮಾಜದ ಮುಖಂಡರು ಹಳ್ಳಿ ಹಳ್ಳಿಗೆ ಹೋಗಿ ಕರಪತ್ರ ಬ್ಯಾನರ್ ವಿತರಿಸಿ, ಜಾಗೃತಿ ಮೂಡಿಸಿ, ಪ್ರಚಾರ ನಡೆಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಅಮೃತ ಡಿಗ್ಗಿ ಮಾತನಾಡಿ, ಸಮಾವೇಶ ಏಕ ಪಕ್ಷೀಯ ನಿರ್ಣಯವಲ್ಲ. ವಿರೋಧಿಸುವವರನ್ನು ಮನವೊಲಿಸಿ, ಪೂರ್ವಭಾವಿ ಸಭೆಗೆ ಆಹ್ವಾನಿಸಲಾಗುವುದು ಎಂದರು.
ಪ್ರಮುಖರಾದ ಜಗನ್ನಾಥ ಭೀಮನಳ್ಳಿ, ಅರ್ಜುನ ಜಮಾದಾರ, ಅನೀಲ ಕೂಡಿ, ಸಂತೋಷ ಹಳಿಗೋದಿ, ರಾಯಪ್ಪ ಹೊನಗುಂಟಿ, ರಮೇಶ ಬಾದನಳ್ಳಿ, ಪ್ರಶಾಂತ ನಂದಳ್ಳಿ, ಪ್ರಕಾಶ ಕಮಕನೂರ, ರಮೇಶ ಫಿರೋಜಾಬಾದ್, ನಾಗು ಜಮಾದಾರ ಆಜಾದಪುರ, ಬಾಪುಗೌಡ ಮಾಲಿಪಾಟೀಲ್, ನಟರಾಜ ಕಟ್ಟಿಮನಿ, ರಾಜೇಶ್ವರ ಅಂಬರಾಯ, ರವಿ ಡೊಂಗರಗಾಂವ, ಬಸವರಾಜ ಹರವಾಳ, ರಮೇಶ ನಾಟಿಕರ, ವಿಜಯಕುಮಾರ ಹದಗಲ, ಸಂದೇಶ ಕಮಕನೂರ, ಶರಣು ಕವಲಗಿ, ಅಶೋಕ ಬಿದನೂರು, ಮಲ್ಲು ಕೂಡಿ, ಬಾಬಾಸಾಹೇಬ್ ಇತರರಿದ್ದರು.