ಜಿಲ್ಲೆ

ಕೋಲಾರಮ್ಮ ರಥೋತ್ಸವ ಅದ್ಧೂರಿ

ಕೋಲಾರ: ನಗರ ದೇವತೆ ಶ್ರೀಕೋಲಾರಮ್ಮ ಬ್ರಹ್ಮರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಬ್ರಹ್ಮರಥೋತ್ಸವ ಪ್ರಯುಕ್ತ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ರಥಶಾಂತಿ, ರಥಬಲಿ, ಆಚಾರ್ಯ ಪೂಜೆ ನಡೆಯಿತು. ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ರಥದ ಬಳಿಗೆ ತರಲಾಯಿತು.

ನಂತರ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ವಿದ್ಯುಕ್ತವಾಗಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ಸೋಮೇಶ್ವರ ಸ್ವಾಮಿಯ ಸ್ಮರಣೆಯೊಂದಿಗೆ ಬಾಳೆ ಹಣ್ಣು, ಹೂವು, ದವನ ಅರ್ಪಿಸಿದರು.

ದೇವಾಲಯದ ಮುಂಭಾಗದಿಂದ ಆರಂಭವಾದ ತೇರಿಗೆ ಸೋಮೇಶ್ವರ ದೇವಾಲಯ ಮುಂಭಾಗದ ರಸ್ತೆಯಲ್ಲಿ ಮರದ ಕೊಂಬೆ ಅಡ್ಡವಾಯಿತು. ಬಳಿಕ ಬೆಸ್ಕಾಂ ವಾಹನ ಕರೆಯಿಸಿ ಒಣ ಕೊಂಬೆ ಕತ್ತರಿಸಿದ ಬಳಿಕ ತೇರು ಮುಂದೆ ಸಾಗಿತು. ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಸೇರಿ ನೂರಾರು ಮಂದಿ ರಥವನ್ನು ಎಳೆದರು. ದೇವಿಯನ್ನು ಹೊತ್ತ ತೇರು ಶಂಕರ ಮಠ ಮುಂಭಾಗದ ರಸ್ತೆ, ಕಾಲೇಜು ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರಥ ಬರುತ್ತಿದ್ದಂತೆ ರಸ್ತೆ ಬದಿಯಲ್ಲಿನ ನಿವಾಸಿಗಳು, ಮಹಿಳೆಯರು ರಸ್ತೆಗೆ ನೀರು, ರಂಗವಲ್ಲಿ ಹಾಕಿ ಹಣ್ಣುಕಾಯಿ ಅರ್ಪಿಸಿದರು. ಯುವಕರ ಗುಂಪು ಈಡುಗಾಯಿ ಒಡೆದು ಪೂಜೆ ಸಲ್ಲಿಸಿತು. ಹಲವು ಕಡೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಎರಡು ವರ್ಷದಿಂದ ಕೊರೊನಾ ಕಾರಣ ಬ್ರಹ್ಮರಥೋತ್ಸವಕ್ಕೆ ಚಿಕ್ಕ ರಥ ಬಳಸಲಾಗಿತ್ತು. ಆದರೆ, ಈ ಬಾರಿ ದೊಡ್ಡ ರಥವನ್ನು ಬಳಸಲಾಗಿತ್ತು. ಅರ್ಚಕರಾದ ಸೋಮಶೇಖರ ದೀಕ್ಷಿತ್​, ರಾಜದೀಕ್ಷಿತ್​, ವಿನಯ್​ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.