ಜಿಲ್ಲೆ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಅನುಮಾನ : ಸಚಿವ ಸುಧಾಕರ್ ಹೇಳಿಕೆ ವರುಣಾದಲ್ಲಿ ಬ್ಯಾಟಿಂಗ್, ಕೋಲಾರಕ್ಕೆ ಬೌಲಿಂಗ್ ಎಂದು ವ್ಯಂಗ್ಯ

ಕೋಲಾರದ ಪ್ರಥಮ ದರ್ಜೆಯ ಗುತ್ತಿಗೆದಾರ ಮತ್ತು ಸಿ.ಬೈರೇಗೌಡ ತಾಂತ್ರಿಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಅವರ ಮನೆಗೆ ಆರೋಗ್ಯ ಸಚಿವ ಕೆ.ಸುಧಾಕರ್ ಭೇಟಿ ನೀಡಿರುವುದು.

ಕೋಲಾರ: ಕಾಂಗ್ರೆಸ್‌ನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಖೆಡ್ಡಾ ತೋಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಸೋಲಿನ ಭೀತಿಯಿಂದ ಅವರನ್ನು ಕೋಲಾರಕ್ಕೆ ಕರೆತಂದು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಆರೋಪಿಸಿದರು.
ಕೋಲಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಅನುಮಾನ. ಅವರು ಕೋಲಾರಕ್ಕೆ ಬಾಲ್ ಎಸೆದು ವರುಣಾದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಕೋಲಾರದಲ್ಲಿ ಅವರಿಗೆ ಉತ್ತಮ ವಾತಾವರಣವಿಲ್ಲ ಎಂದರು.
ಅನೈತಿಕ ಮೈತ್ರಿ ವಿರೋಧಿಸಿ ಹೊರಗಡೆ ಬಂದೆವು: ಹಣದಾಸೆಗೆ ನೀವು ಬಿಜೆಪಿ ಸೇರಿದ್ದೀರಿ ಎಂಬ ಸಿದ್ದರಾಮಯ್ಯ ಆರೋಪಕ್ಕೆ, ಅವರಷ್ಟು ಬುದ್ಧಿವಂತರು ನಾವಲ್ಲ ಎಂದು ಪ್ರತಿಕ್ರಿಯಿಸಿದ ಸುಧಾಕರ್, ನಾನಾದರೂ ಕಾಂಗ್ರೆಸ್‌ನಲ್ಲಿ 10 ವರ್ಷ ಇದ್ದೆ. ಆದರೆ ಸಿದ್ದರಾಮಯ್ಯ 30 ವರ್ಷಗಳಿಂದ ಜೆಡಿಎಸ್‌ನಲ್ಲಿ ಉನ್ನತ ಅಧಿಕಾರ ಅನುಭವಿಸಿ ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ಬಯ್ಯುತ್ತಿದ್ದವರು, ಆ ಪಕ್ಷಕ್ಕೆ ಏಕೆ ಬಂದಿರಿ ಎಂದು ನಾನು ಪ್ರಶ್ನಿಸಬಹುದು? ಜೆಡಿಎಸ್‌ನೊಂದಿಗೆ ಅನೈತಿಕ ಮೈತ್ರಿ ಸರ್ಕಾರವನ್ನು ನಾವು ವಿರೋಧಿಸಿದ್ದೆವು. ಲೋಕಸಭೆ ಚುನಾವಣೆ ಬಳಿಕ ಒಂದು ದಿನವೂ ಕುಮಾರಸ್ವಾಮಿ ಅವರನ್ನು ಅಧಿಕಾರದಲ್ಲಿ ಮುಂದುವರಿಯಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಒಂದು ವರ್ಷ ಕಾಯಿರಿ ಎಂದು ನನಗೂ ಮತ್ತು ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಸೇರಿದಂತೆ ಕಾಂಗ್ರೆಸ್‌ನಿಂದ ಹೊರಬಂದ ಎಲ್ಲರಿಗೂ ಹೇಳಿದರು. ವರ್ಷ ಕಾದೆವು. ಬಳಿಕ ರಾಹುಲ್ ಗಾಂಧಿ 5 ವರ್ಷ ಮುಂದುವರಿಸಬೇಕೆಂದು ಹೇಳಿದ್ದಾರೆ ಎಂದರು. ಆದ ಕಾರಣ ನಾವು ಹೊರ ಬಂದೆವು ಎಂದು ತಿಳಿಸಿದರು.


ಪ್ರಾಮಾಣಿಕವಾಗಿ ಗೆದ್ದಿದ್ದೇನೆ: ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಯಿಂದ ಪ್ರಾಮಾಣಿಕವಾಗಿ ಗೆದ್ದು ಬಂದಿದ್ದೇನೆ. ಪಕ್ಷ ಬಿಟ್ಟ ಸಂದರ್ಭದಲ್ಲಿ ಜಿಲ್ಲೆಯ ನಜೀರ್ ಅಹ್ಮದ್ ಅವರು ನನ್ನನ್ನೂ ಸೇರಿ ಉಳಿದವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸಿದ್ದರಾಮಯ್ಯ ಅವರು 2 ಗಂಟೆ ನನ್ನೊಂದಿಗೆ ಮಾತನಾಡಿದರು. ರಾಜೀನಾಮೆ ನೀಡಿದ ಬಳಿಕ ಮತ್ತೆ ವಾಪಸ್ ಬರಲು ಸಾಧ್ಯವಿಲ್ಲ ಎಂದು ಅಂದೇ ತಿಳಿಸಿದ್ದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.


ಕೋಲಾರಕ್ಕೆ ಮೆಡಿಕಲ್ ಕಾಲೇಜು ಭರವಸೆ: ಕೋಲಾರ-ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ 3 ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದ ಅವರು ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಭರವಸೆ ನೀಡಿದರು. ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಶಾಸಕರಾದವರಿಗೆ ವೈದ್ಯಕೀಯ ಕಾಲೇಜು ತರಲು ಸಾಧ್ಯವಾಗಲಿಲ್ಲ. ಇದೇ ಜಿಲ್ಲೆಯವರೇ ಆರೋಗ್ಯ ಸಚಿವರಾಗಿದ್ದರು, ಸ್ಪೀಕರ್ ಆಗಿದ್ದರು, ಆದರೆ ನಾನು ಈ ಜಿಲ್ಲೆಯಲ್ಲಿ ಎಲ್ಲ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದೇನೆ ಎಂದರು.

ಉತ್ತರ ಕೇಳುವ ವ್ಯವಧಾನ ಅವರಿಗಿಲ್ಲ: ಸಿಎಜಿ ವರದಿಯಂತೆ 2013-18 ಅವಧಿ ಯಲ್ಲಿ ಹಣಕಾಸಿನ ದುರ್ಬಳಕೆ ನಡೆದಿದೆ ಎಂದು ವರದಿ ನೀಡಿದೆ. ಅದನ್ನೇ ನಾನು ಮಾತಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷ 35 ಸಾವಿರ ಕೋಟಿ ಅವ್ಯವಹಾರ ನಡೆಸಿದೆ ಎಂದಿಲ್ಲ. ಕೋವಿಡ್ ಸಂದರ್ಭದಲ್ಲಿ ಮಾಡಿರುವ ಎಲ್ಲ ಆರೋಪಗಳಿಗೆ ಸದನದಲ್ಲಿ ಉತ್ತರ ನೀಡಿದ್ದೇನೆ. ನನ್ನ ಉತ್ತರ ಕೇಳುವ ವ್ಯವಧಾನ ಅವರಿಗಿಲ್ಲ. ನಾನು ಈ ಬಗ್ಗೆ ಶ್ವೇತ ಪತ್ರ ನೀಡಲು ಸಿದ್ಧನಿದ್ದೇನೆ. ಆದರೆ ನನ್ನ ಉತ್ತರ ನೀಡುವ ಮೊದಲು ಅವರು ಸದನದಿಂದ ಹೊರಹೋಗಿದ್ದರು ಎಂದು ಸುಧಾಕರ್ ತಿಳಿಸಿದರು.

ನಾನೊಬ್ಬ ಬ್ಯಾಟ್ಸ್‌ಮನ್, ಎದುರಿಸುವುದು ಗೊತ್ತಿದೆ: ಕ್ರಿಕೆಟ್‌ನಲ್ಲಿ ಬೌಲರ್ ನೋಡಿ, ಬ್ಯಾಟಿಂಗ್ ಮಾಡುವುದಲ್ಲ. ಚೆಂಡಿನ ಸ್ವಿಂಗ್, ವೇಗ ನೋಡಿ ಬ್ಯಾಟಿಂಗ್ ಮಾಡಬೇಕು. ನಾನೊಬ್ಬ ಬ್ಯಾಟ್ಸ್‌ಮನ್, ಹೇಗೆ ಬೌಲಿಂಗ್ ಎದುರಿಸಬೇಕು ಎಂಬುದು ಗೊತ್ತಿದೆ. 3 ಬಾರಿ ಶಾಸಕನಾಗಿದ್ದೇನೆ. ಪ್ರತಿ ಬಾರಿ ನನ್ನ ಗೆಲುವಿನ ಅಂತರ ಹೆಚ್ಚಿಸಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಪ್ರೀತಿ ಇದೆ ಅಂದುಕೊಂಡಿದ್ದೆ. ಅದನ್ನು ಅವರು ಕಳೆದುಕೊಂಡಿದ್ದಾರೆ, ನನ್ನ ವಿರುದ್ಧ ಯಾರನ್ನೇ ನಿಲ್ಲಿಸಿದರೂ ಎದುರಿಸುವುದು ಗೊತ್ತಿದೆ. ಮೊದಲು ಅವರ ಗೆಲುವನ್ನು ನೋಡಿಕೊಳ್ಳಲಿ ಎಂದು ಸುಧಾಕರ್ ಹೇಳಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ವೈ.ಸಂಪಂಗಿ ಇದ್ದರು.

ಕೋಲಾರದಲ್ಲಿ ಪ್ರಚಾರ ಆರಂಭ

ಕೋಲಾರ: ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಗುಡುಗಿದ ಬೆನ್ನ ಹಿಂದೆಯೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬುಧವಾರ ಕೋಲಾರದಲ್ಲಿ ಪ್ರಮುಖ ಒಕ್ಕಲಿಗರ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಕೋಲಾರ ಮಾರ್ಗವಾಗಿ ಕೆಜಿಎಫ್ ಸಾರ್ವಜನಿಕರ ಆಸ್ಪತ್ರೆ ಹೋಗುವ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ ವಹಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಸಂಜೆ ಕೆಜಿಎಫ್‌ನಿಂದ ವಾಪಸಾದ ನಂತರ ಕೋಲಾರದ ಪ್ರಥಮ ದರ್ಜೆಯ ಗುತ್ತಿಗೆದಾರ ಮತ್ತು ಸಿ. ಬೈರೇಗೌಡ ತಾಂತ್ರಿಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಅವರ ಮನೆಗೆ ತೆರಳಿ ಈ ಬಾರಿ ಬಿಜೆಪಿಯಿಂದ ಜಿಲ್ಲೆಯಾದ್ಯಂತ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಹಾಗೂ ಗುತ್ತಿಗೆದಾರರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಕೃಷ್ಣಾರೆಡ್ಡಿ ಗುತ್ತಿಗೆದಾರರ ಸಂಘದ ಕೋಲಾರ ಜಿಲ್ಲಾಧ್ಯಕ್ಷರಾಗಿದ್ದು ಇತ್ತೀಚೆಗೆ ಜಿಲ್ಲೆಯ ಗುತ್ತಿಗೆದಾರರಲ್ಲಿ ಸಚಿವ ಮುನಿರತ್ನ ಶೇ.40 ಕಮೀಷನ್ ಕೇಳಿದ್ದಾರೆಂಬ ಆರೋಪದಲ್ಲಿ ಕೃಷ್ಣಾರೆಡ್ಡಿ ಸೇರಿದಂತೆ ಕೆಲವು ಗುತ್ತಿಗೆದಾರರ ಹೆಸರು ಸೇರಿತ್ತು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆಯಲ್ಲಿ ಬಿಜೆಪಿಗೆ ಒಕ್ಕಲಿಗರ ಮತಗಳನ್ನು ಸೆಳೆಯುವ ಸಲುವಾಗಿ ಡಾ.ಕೆ.ಸುಧಾಕರ್ ಅವರು ಕೃಷ್ಣಾರೆಡ್ಡಿ ಮನೆ ಸೇರಿದಂತೆ ಕೆಲವು ಒಕ್ಕಲಿಗ ಮುಖಂಡರನ್ನು ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ಬಿಜೆಪಿಯಿಂದ ವರ್ತೂರು ಪ್ರಕಾಶ್ ನಾನೇ ಸ್ಪರ್ಧಿಸುವುದು ಎನ್ನುತ್ತಿದ್ದಾರೆ, ಈ ಇಬ್ಬರು ಒಂದೇ ಸಮುದಾಯಕ್ಕೆ ಸೇರುವುದರಿಂದ ಒಕ್ಕಲಿಗರ ಮತಗಳು ಜೆಡಿಎಸ್‌ಗೆ ಹೋಗುವ ಬದಲು ಬಿಜೆಪಿ ಕಡೆಗೆ ಒಕ್ಕಲಿಗರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಸಚಿವರು ಕೃಷ್ಣಾರೆಡ್ಡಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ಮಾಜಿ ಸಚಿವ ವರ್ತೂರು ಪ್ರಕಾಶ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜು ಇದ್ದರು.