ಜಿಲ್ಲೆ

ಕೋಲಾರದಲ್ಲಿ ಶೇ.18 ಮಂದಿಗೆ ಲಸಿಕೆ ಹಾಕುವುದೇ ಸವಾಲು

ಕೋಲಾರ: ಕರೊನಾ ಎರಡನೇ ಅಲೆ ತಗ್ಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ನಿರಾಸಕ್ತಿ ಮೂಡಲಾರಂಭಿಸಿದೆ. ಜಿಲ್ಲೆಯಲ್ಲಿ ಬಾಕಿಯಿರುವ ಶೇ.18 ಮಂದಿಗೆ ಲಸಿಕೆ ಹಾಕಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 11,59,510 ಮಂದಿಗೆ ಲಸಿಕೆ ಹಾಕಿಸುವ ಗುರಿಹೊಂದಿದ್ದ ಆರೋಗ್ಯ ಇಲಾಖೆ 9,55,101 ಮಂದಿಗೆ ಮೊದಲ ಡೋಸ್ ಹಾಕುವ ಮೂಲಕ ಶೇ.82 ಸಾಧನೆ ಮಾಡಿದೆ. 5,60,897 ಮಂದಿಗೆ (ಶೇ.59) ಎರಡನೇ ಲಸಿಕೆ ಹಾಕಲಾಗಿದೆ. ಉಳಿದ 2,04,409 (ಶೇ.18) ಮಂದಿಗೆ ಲಸಿಕೆ ಹಾಕುವ ಸವಾಲಿದೆ.

60 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕಾಕರಣ ಆರಂಭಿಸಲಾಗಿದ್ದು, 1,81,526 ಮಂದಿಯ ಪೈಕಿ 1,52,103 (ಶೇ.84) ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಪೈಕಿ 1,10,315 (ಶೇ.73) ಮಂದಿ ಎರಡನೇ ಡೋಸ್ ಮುಗಿಸಿದ್ದಾರೆ. ಆದರೆ ಇನ್ನೂ 29,423 ಮಂದಿ ಮೊದಲ ಡೋಸ್ ಕೂಡ ಪಡೆದಿಲ್ಲ.

ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟು 59 ವರ್ಷದೊಳಗಿನ 2,66,553 ಮಂದಿಗೆ ಲಸಿಕೆ ಗುರಿಗೆ ಇದುವರೆಗೆ 2,35,181 (ಶೇ. 88) ಮಂದಿ ಪ್ರಥಮ ಡೋಸ್ ಪಡೆದರೆ, 1,58,456 ಮಂದಿ (ಶೇ.68) ಎರಡನೇ ಡೋಸ್ ಪೂರೈಸಿದ್ದಾರೆ. 31,372 ಮಂದಿ ಇನ್ನೂ ಮೊದಲ ಡೋಸ್ ಪಡೆದಿಲ್ಲ.

ಮೂರನೇ ಹಂತದಲ್ಲಿ 1ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಕಾರ್ಯ ಕೈಗೆತ್ತಿಕೊಂಡಾಗ ಜಿಲ್ಲೆಯಲ್ಲಿ ಒಟ್ಟು 1,11,431 ಮಂದಿಗೆ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿತ್ತು. ಈ ಪೈಕಿ 5,35,843 (ಶೇ.76) ಮಂದಿ ಪ್ರಥಮ ಡೋಸ್ ಪಡೆದರೆ, 2,60,999 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 1,75,588 ಮಂದಿ ಇನ್ನೂ ಕರೊನಾ ಲಸಿಕೆ ಹಾಕಿಸಿಕೊಳ್ಳುವ ಗೋಜಿಗೇ ಹೋಗಿಲ್ಲ.

ವಾರಿಯರ್ಸ್‌ಗಳಿಗೆ ಲಸಿಕೆ: ಜಿಲ್ಲೆಯಲ್ಲಿ ಗುರುತಿಸಿದ್ದ 14,676 ಕರೊನಾ ವಾರಿಯರ್ಸ್‌ಗಳಿಗೆ ಶೇ.101 ಸಾಧನೆಯಾಗಿದೆ. 2ನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಲ್ಲಿ 17,298 ಮಂದಿ ಪೈಕಿ 17,298 ಜನ ಮೊದಲ ಡೋಸ್ ಪಡೆದರೆ, 16334 ಮಂದಿ 2ನೇ ಡೋಸ್ (ಶೇ. 94) ಪಡೆದಿದ್ದಾರೆ.

ಕೋಲಾರ ನಗರದಲ್ಲಿ ಶೇ.62 ಲಸಿಕಾಕರಣ ಆಗಿದ್ದು, ನಗರ, ಗ್ರಾಮೀಣ ಭಾಗದಲ್ಲಿ ಒಂದು ಸಮುದಾಯದ ಕಡೆಯಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ, 500ಕ್ಕೂ ಹೆಚ್ಚು ಜನಸಂಖ್ಯೆ ಇರುವ ವೇಮಗಲ್, ನರಸಾಪುರ ಭಾಗದಲ್ಲೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಜಿಲ್ಲಾದ್ಯಂತ ನಿತ್ಯ ಸರಾಸರಿ 4-5 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದು, ಇನ್ನಷ್ಟು ಪ್ರಗತಿ ಸಾಧಿಸಬಹುದಾದರೂ 2ನೇ ಅಲೆ ತಗ್ಗಿದೆ, 3ನೇ ಅಲೆಯ ಆತಂಕ ಸದ್ಯಕ್ಕಿಲ್ಲದಿರುವುದರಿಂದ ಉಳಿದಿರುವ 2.04 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಕೋವಿಶೀಲ್ಡ್, ಕೋ ವ್ಯಾಕ್ಸಿನ್ ಲಸಿಕೆ ಕೊರತೆ ಇಲ್ಲ, ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸಿರುವುದರಿಂದ ಎಲ್ಲೂ ಲಸಿಕಾ ಕೇಂದ್ರಗಳು ಖಾಲಿ ಹೊಡೆಯುತ್ತಿವೆ, ಕಡಿಮೆ ಸಾಧನೆ ಆಗಿರುವ ಗ್ರಾಮಗಳಿಗೆ ಆಯಾ ತಾಲೂಕಿನ ಐಇಸಿ ತಂಡ, ವೈದ್ಯರು, ಗ್ರಾಪಂ ಅಧ್ಯಕ್ಷರು, ಆಯಾ ಭಾಗದ ಸದಸ್ಯರೊಂದಿಗೆ ಮನೆ ಮನೆಗೆ ತೆರಳಿ ಮನವೊಲಿಸಲಾಗುತ್ತದೆ. ಬಂಗಾರಪೇಟೆಯ ವಟ್ರಕುಂಟೆ, ಬೇತಮಂಗಲ, ಚಿಕ್ಕಅಂಕಡಹಳ್ಳಿ, ಶ್ರೀನಿವಾಸಪುರದ ಸೀಗೆಹಳ್ಳಿ, ಪೆದ್ದಪಲ್ಲಿ. ಗೊಟ್ರಕುಂಟೆ, ಹೊಗಳಗೆರೆ ಗ್ರಾಮಗಳಿಗೆ ತೆರಳಿದ ತಂಡ ಅರ್ಹರಿಗೆ ಮನವೊಲಿಸಿ ಲಸಿಕೆ ನೀಡಿದೆ. ಲಸಿಕೆಯಿಂದ ದೂರ ಉಳಿದವರನ್ನು ಗುರುತಿಸಿ ಲಸಿಕೆ ಹಾಕುವ ಕಸರತ್ತು ನಡೆಸುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಕರೊನಾ ಲಸಿಕಾಕರಣದಲ್ಲಿ ಶೇ.82 ಸಾಧನೆ ಆಗಿದೆ. ಕೆಲ ಗ್ರಾಮಗಳಲ್ಲಿ ಜನ ಲಸಿಕೆ ಬೇಡ ಎಂದು ತಿರಸ್ಕರಿಸುವುದರ ಜತೆಗೆ ಹಲ್ಲೆ ಯತ್ನವೂ ನಡೆದಿದೆ. ಅಂತಹ ಗ್ರಾಮಗಳಲ್ಲಿ ಐಇಸಿ ಚಟುವಟಿಕೆ ಮೂಲಕ ಜನರಲ್ಲಿ ಅರಿವು ಮೂಡಿಸಿ ಗುರಿ ಸಾಧಿಸುವ ಪ್ರಯತ್ನ ಸಾಗಿದೆ. ಡಾ.ಜಗದೀಶ್, ಡಿಎಚ್‌ಒ, ಆರೋಗ್ಯ ಇಲಾಖೆ ಕೋಲಾರ ಜಿಲ್ಲೆಯಲ್ಲಿ ಮತದಾರರಾಗಿದ್ದುಕೊಂಡು ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿ ಅಲ್ಲೇ ಆಧಾರ್ ಕಾರ್ಡ್ ಹೊಂದಿರುವುದರಿಂದ ಆ ಭಾಗದಲ್ಲೇ ಕರೊನಾ ಲಸಿಕೆ ಪಡೆದಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಲಾಖೆಯಿಂದ ಆಶಾ, ಸಿಡಿಪಿಒ, ಬಿಎಲ್‌ಒಗಳ ಸಹಕಾರ ಪಡೆದು ಮನೆ ಮನೆ ಸಮೀಕ್ಷೆ ನಡೆಸಿ ಗುರುತಿಸಲಾಗುತ್ತಿದೆ. ಡಾ. ರಮ್ಯದೀಪಿಕ, ತಾಲೂಕು ಆರೋಗ್ಯಾಧಿಕಾರಿ, ಕೋಲಾರ