ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 1 ಅಥವಾ 2ನೇ ಸ್ಥಾನ ಪಡೆದುಕೊಳ್ಳುವಂತಾಗಲು ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕೆಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.
ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿ 6ನೇ ಸ್ಥಾನ ತಂದು ಕೊಟ್ಟು ಜಿಲ್ಲೆಯ ಘನತೆ ಹೆಚ್ಚಿಸಿದ್ದೀರಿ, ಪರೀಕ್ಷೆಗೆ 29 ದಿನ ಬಾಕಿ ಇದೆ. ಈ ಬಾರಿ ಮೊದಲೆರಡು ಸ್ಥಾನಗಳಲ್ಲಿ ಸಾಧನೆ ಕಾಣುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಫಲಿತಾಂಶದಲ್ಲಿ ಶ್ರೀನಿವಾಸಪುರ ತಾಲೂಕು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿರುವಾಗ ಇತರ ತಾಲೂಕುಗಳು ಸಾಧಿಸಲು ಏಕೆ ಸಾಧ್ಯವಾಗಿಲ್ಲವೆಂದು ಆತ್ಮಾವಲೋಕನ ಮಾಡಿಕೊಳ್ಳಿ. ಜೂನಿಯರ್ ಕಾಲೇಜು ಫಲಿತಾಂಶದಲ್ಲಿ ಇಳಿಮುಖಕ್ಕೆ ಕಾರಣ ಹುಡುಕಿ ಮಕ್ಕಳಿಗೆ ಮಾರ್ಗದರ್ಶನ ನೀಡಿ. ಶಿಕ್ಷಕರಿಂದ ಕೆಲಸ ಮಾಡಿಸಿ ಎಂದು ತಾಕೀತು ಮಾಡಿದರು.
ಬಂಗಾರಪೇಟೆಯ ಕೆಲವು ಗಡಿ ಶಾಲೆಗಳಿಗೆ ಭೇಟಿ ನೀಡಿದ್ದಾಗ ಶಿಕ್ಷಕರು ಮಧ್ಯಾಹ್ನದ ವೇಳೆ ಶಾಲೆಯಲ್ಲಿರುವುದಿಲ್ಲ ಎಂಬ ದೂರು ಮಕ್ಕಳಿಂದ ಕೇಳಿ ಬಂದಿದ್ದರಿಂದ ಗಮನಹರಿಸಲು ಬಿಇಒಗೆ ಸೂಚಿಸಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಇಂತಹ ನಡವಳಿಕೆ ಸಹಿಸಲಾಗದು ಎಂದು ಎಚ್ಚರಿಸಿದರು.
ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ ಮಾತನಾಡಿ, ಎಲ್ಲ ಮಕ್ಕಳು ನಿಮ್ಮ ಮಕ್ಕಳಂತೆ ಎಂದು ಭಾವಿಸಿ, ಅವರಿಗೆ ಮಾರ್ಗದರ್ಶನ ನೀಡಿ ಎಂದರು.
75 ಅಧಿಕಾರಿಗಳ ನೇಮಕ: ‘ಚಿತ್ರಮಿತ್ರ’ ಚಿತ್ರಬಿಡಿಸು ಅಂಕಗಳಿಸು ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಪ್ರಭಾರ ಡಿಸಿ ಎಚ್.ವಿ.ದರ್ಶನ್, ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ 75 ಮಂದಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಪ್ರೌಢಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇವರು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಮಾರ್ಗದರ್ಶನ ನೀಡಿ ಆತ್ಮಸ್ಥೈರ್ಯ ತುಂಬುವ, ಪ್ರೇರಣಾದಾಯಕ ನುಡಿಗಳನ್ನಾಡಲಿದ್ದಾರೆ ಎಂದರು.
ಇಲಾಖೆ ಸನ್ನದ್ದ: ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಸುಗಮ ಪರೀಕ್ಷೆಗೆ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿದರು. ರೋಟರಿ ಸಂಸ್ಥೆ ಪ್ರತಿನಿಧಿಗಳಾದ ಶ್ರೀಧರ್, ಶ್ರೀಕಾಂತ್, ಮುರಳಿ ಶಾಲೆಗಳಿಗೆ ನೀಡಿರುವ ಇ-ವಿದ್ಯಾ ಪ್ರೊಜೆಕ್ಟರ್ ಬಳಕೆ ಕುರಿತು ಮುಖ್ಯಶಿಕ್ಷಕರಿಗೆ ತರಬೇತಿ ನೀಡಿದರು.
ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಬಿಇಒಗಳಾದ ಮಾಧವರೆಡ್ಡಿ, ಉಮಾದೇವಿ, ಕೆಂಪಯ್ಯ, ಸೋಮೇಶ್, ಸಿದ್ದರಾಜು, ಬಿಆರ್‌ಸಿ ರಾಮಕೃಷ್ಣಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಬಿ.ವೆಂಕಟೇಶಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಸಿ.ಎಂ.ವೆಂಕಟರಮಣಪ್ಪ ಉಪಸ್ಥಿತರಿದ್ದರು.