ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಜಿಲ್ಲೆಯಲ್ಲಿ ರಾಜಕಾರಣ ಗರಿಗೆದರಿದೆ. ಈ ಮಧ್ಯೆ ಜೆಡಿಎಸ್, ಬಿಜೆಪಿ ನಾಯಕರು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಕುರಿತಂತೆ ಗೊಂದಲದ ಹೇಳಿಕೆ ಮುಂದುವರಿಸಿದ್ದಾರೆ.
ಕೋಲಾರಕ್ಕೆ ಆಗಮಿಸುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ‘ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಎದುರಾಗಿದೆ. ಕೋಲಾರದಲ್ಲಿ ಅವರನ್ನು ಸೋಲಿಸಿ ಕಳುಹಿಸುತ್ತಾರೆ. ಕೋಲಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬಲಿಷ್ಠವಾಗಿದೆ’ ಎಂದು ಭಾಷಣ ಮಾಡಿ, ಬಹಿರಂಗ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಯಾವುದೇ ಕಾರ್ಯಕರ್ತರ ಸಭೆ ನಡೆದರೂ ಶಾಸಕ ಶ್ರೀನಿವಾಸಗೌಡ ಮತ್ತು ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಪ್ರಯತ್ನಿಸಿದ ಘಟಬಂಧನ್ ವಿರುದ್ಧ ಹರಿಹಾಯುತ್ತಿದ್ದಾರೆ. ಒಟ್ಟಾರೆಯಾಗಿ ಕೋಲಾರದಲ್ಲಿ ರಾಜಕೀಯ ಗರಿಗೆದರಿದ್ದು, ಆರೋಪ ಪ್ರತ್ಯಾರೋಪಗಳ ಭರಾಟೆ ರಾಜಕಾರಣದ ಕಾವು ಹೆಚ್ಚಿಸಿದೆ.
ಮುಳಬಾಗಿಲಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಬಂಗಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ೋಷಣೆಯಾಗಬೇಕಿದೆ. ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಕೆಜಿಎಫ್‌ನಲ್ಲಿ ಮಾಜಿ ಶಾಸಕ ವೈ.ಸಂಪಂಗಿ, ಮಾಲೂರಿನಲ್ಲಿ ಮಾಜಿ ಶಾಸಕ ಮಂಜುನಾಥ್‌ಗೌಡ ತಾವೇ ಅಭ್ಯರ್ಥಿ ಎಂದು ಪ್ರಚಾರದಲ್ಲಿ ಮಗ್ನರಾಗಿದ್ದಾರೆ.
ವರ್ತೂರು ಪ್ರಕಾಶ್, ‘ಕೋಲಾರದಲ್ಲಿ ನಾನೇ ಬಿಜೆಪಿ ಅಭ್ಯರ್ಥಿ. ನನ್ನ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಿದರೆ ಒಳ್ಳೆಯದು. ಅವರನ್ನು ಸೋಲಿಸುತ್ತೇನೆ’ ಎಂದು ಅರ್ಭಟಿಸುತ್ತಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ನವರು ಮೌನ ವಹಿಸಿದ್ದು, ನಗರಕ್ಕೆ ಸಿದ್ದರಾಮಯ್ಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ವರ್ತೂರು ಪ್ರಕಾಶ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹೇಳಿಕೆ ನೀಡುತ್ತಿದ್ದರೂ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡುತ್ತಿಲ್ಲ. ಸೋಲುವ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಚಿಂತೆ ಏಕೆ? ಅವರು ಯಾವುದೇ ಹೇಳಿಕೆ ನೀಡಿದರೂ ಆ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಕೆಲಸ ನಮ್ಮದು. ಹತಾಶೆಗೊಂಡು ಇಲ್ಲಸಲ್ಲದ ಆರೋಪ ಮಾಡುವವರಿಗೆ ನಮ್ಮ ಉತ್ತರ ಇಲ್ಲ ಎಂದು ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ನಾಯಕರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಲ್ಲ ಎಂದು ಹೇಳುತ್ತಿದ್ದು, ಸಿದ್ದರಾಮಯ್ಯ ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಬಲ ಸ್ಪರ್ಧಿ ಎನ್ನುವುದು ಎರಡೂ ಪಕ್ಷದವರಿಗೂ ಗೊತ್ತಿದೆ ಎನ್ನುವುದಂತೂ ಬಹಿರಂಗ ಸತ್ಯ.
ಕೋಲಾರದಲ್ಲಿ ಸಿದ್ದರಾಮಯ್ಯಗೆ ಮನೆ, ಕಚೇರಿ ಸಿದ್ಧ!
ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ೋಷಣೆ ಮಾಡಿದ್ದು, ಮುಂದುವರಿದ ಕಾರ್ಯಚಟುವಟಿಕೆಗಳ ಭಾಗವಾಗಿ ನಗರದಲ್ಲಿ ವಾಸ್ತು ಪ್ರಕಾರ ಇರುವ ಮನೆ ಮತ್ತು ಕಚೇರಿಯನ್ನು ಹುಡುಕಲಾಗಿದೆ.
ಸಿದ್ದರಾಮಯ್ಯ ಅವರು ಜ.9ರಂದು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ೋಷಣೆ ಮಾಡಿದ ಬಳಿಕವೂ ಅವರು ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಹಾಗೂ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಅಪಪ್ರಚಾರವನ್ನು ಜೆಡಿಎಸ್, ಬಿಜೆಪಿ ಮುಖಂಡರು ಮಾಡುತ್ತಲೇ ಇದ್ದರು. ಕಾಂಗ್ರೆಸ್‌ನವರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿದ್ದರು. ಇದರ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಅವರಿಗಾಗಿ ವಿಶಾಲ ಜಾಗದಲ್ಲಿ ಮನೆ ಹುಡುಕಾಟ ನಡೆಸಲಾಗಿತ್ತು. ಇದೀಗ ಬೈಪಾಸ್ ಪಕ್ಕದ ಬಸವನತ್ತ ಗ್ರಾಮದಲ್ಲಿ ಮನೆ ಗುರುತಿಸಲಾಗಿದೆ. ಮನೆಯು ವಿಶಾಲವಾಗಿದ್ದು, ಪಾರ್ಕಿಂಗ್ ವ್ಯವಸ್ಥೆ ಇದೆ. ಬೆಂಗಳೂರಿನಿಂದ ಬಂದರೆ ಯಾವುದೇ ಟ್ರಾಫಿಕ್ ಜಾಮ್ ಸಮಸ್ಯೆಯಾಗುವುದಿಲ್ಲ. ಇದೇ 23ಕ್ಕೆ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದು ಆ ದಿನದಂದು ಸ್ಥಳೀಯ ಕಾಂಗ್ರೆಸ್ಸಿಗರು ಅವರಿಗೆ ಮನೆ ತೋರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಬೈಪಾಸ್ ಪಕ್ಕದ ಗೋಕುಲ್ ಕಾಲೇಜು ಹಿಂಭಾಗದ ಚೊಕ್ಕಾ ಕನ್ವೆನ್ಷನ್ ಹಾಲ್‌ನಲ್ಲಿ ಸಿದ್ದರಾಮಯ್ಯ ಅವರ ಕಚೇರಿ ಆರಂಭಿಸಲು ಈಗಾಗಲೇ ತೀರ್ಮಾನಿಸಿದ್ದು, ಕಚೇರಿಗೆ ಬರುವವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಸೇರಿದಂತೆ ಉಳಿದುಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕನ್ವೆನ್ಷನ್ ಹಾಲ್ ವಾಸ್ತು ಹಾಗೂ ಇತರ ಅನುಕೂಲಗಳು ಸೇರಿದಂತೆ ಪಾರ್ಕಿಂಗ್, ಕಾರ್ಯಕರ್ತರ ಸಮಾವೇಶ ನಡೆಸಲು ಸೂಕ್ತ ಸ್ಥಳವಾಗಿದೆ ಎನ್ನಲಾಗಿದೆ.