ಬಂಗಾರಪೇಟೆ:ನದಿನಾಲೆಗಳಿಲ್ಲದ ಕೋಲಾರ ಜಿಲ್ಲೆಯ ರೈತರು ಮಳೆಯನ್ನೇ ಆಶ್ರಯಿಸಿದ್ದು, ಆರ್ಆರ್ಆರ್ ಯೋಜನೆಯ ಮೂಲಕ ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಕೃಷ್ಣಾ ನದಿಯ ನೀರನ್ನು ಕೋಲಾರ&ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಒದಗಿಸಲು ಸೂಕ್ತ ಕ್ರಮವಹಿಸಲಾಗುವುದು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದ ಕೆಸಿಆರ್ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ
ಕೋಲಾರ&ಚಿಕ್ಕಬಳ್ಳಾಪುರಕ್ಕೆ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಯೋಜನೆಗೆ ಕೃಷ್ಣಾ ನದಿಯಿಂದ 6 ಟಿಎಂಸಿ ನೀರು ಒದಗಿಸಬೇಕು ಎಂದು ಆಂಧ್ರ್ರಪ್ರದೇಶದ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರಲ್ಲಿ ಬೇಡಿಕೆ ಇಡಲಾಗಿದೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಭೇಟಿಗೆ ಮುಂದಿನ ತಿಂಗಳು ಸಮಯಾವಕಾಶ ನೀಡಿದ್ದು, ಜಿಲ್ಲೆಯ ಮಾಜಿ ಸಂಸದರು, ಹಾಲಿ ಹಾಗೂ ಮಾಜಿ ಶಾಸಕರ ನಿಯೋಗದೊಂದಿಗೆ ತೆರಳಿ, ಕೃಷ್ಣಾ ನೀರು ಹರಿಸುವ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅರ್ಬನ್ ಸಿಟಿ ರೈಲ್ವೆ ಲೈನ್ ಮಾಲೂರಿಗೂ ವಿಸ್ತರಣೆ: ಅರ್ಬನ್ ಸಿಟಿ ರೈಲ್ವೆ ಲೈನ್ಅನ್ನು ಮಾಲೂರುವರೆಗೆ ವಿಸ್ತರಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ. ನಾನು ಬಂಗಾರಪೇಟೆವರೆಗೂ ವಿಸ್ತರಣೆ ಮಾಡಲು ಮನವಿ ಮಾಡಿದ್ದೇನೆ. ಟೇಕಲ್ ಬಳಿಯ ಮೇಲ್ಸೇತುವೆ ನಿಮಾರ್ಣ ಕಾರ್ಯ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಕಾಮಸಮುದ್ರ ಬಳಿ ಮೇಲ್ಸೇತುವೆ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗುತ್ತದೆ. ಜತೆಗೆ ದೇಶಿಹಳ್ಳಿ ಬಳಿ ಕೆಜಿಎಫ್ಗೆ ಹಾದು ಹೋಗುವ ರೈಲ್ವೆ ಹಳಿಯನ್ನು ನಾಲ್ಕು ಹಳಿಗಳಿಗೆ ಮೇಲ್ದರ್ಜೆಗೇರಿಸಿ, ಅಲ್ಲಿಯೂ ಸಹ 2ರಿಂದ 3ವರ್ಷಗಳಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಮಲ್ಲೇಶ್ ಬಾಬು ಭರವಸೆ ನೀಡಿದರು.
ಕೆಜಿಎಫ್ ಶಾಸಕರು ಕೈಗಾರಿಕೆ ಸ್ಥಾಪಿಸುವ ಬಗ್ಗೆ ಹುಸಿ ಭರವಸೆ ನೀಡುತ್ತಿದ್ದಾರೆ. ವಾಸ್ತವ ಸ್ಥಿತಿಗತಿಗಳೇ ಬೇರೆಯಾಗಿದ್ದು, ಶೀಘ್ರದಲ್ಲಿ ಕೇಂದ್ರ ಸಚಿವರೊಂದಿಗೆ ಕೈಗಾರಿಕೆ ಸ್ಥಾಪನೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯ ಯುವಕರು ಕೆಲಸ ಅರಸಿ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು ತಾಲೂಕಿನಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ ಮಹೇಶ್ ಮಾತನಾಡಿ, ಮುಂಬರುವ ಎಪಿಎಂಸಿ, ಪಿಎಲ್ಡಿ ಬ್ಯಾಂಕ್, ತಾಪಂ ಮತ್ತು ಜಿಪಂ ಚುನಾವಣೆಗಳಿಗೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಚಿಂತೆಯನ್ನು ಬಿಟ್ಟು ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ಬೂತ್ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಒತ್ತು ನೀಡಬೇಕು ಎಂದರು.
ವಿಕೋಟ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ:ಬಾಗೇಪಲ್ಲಿ, ಕೋಲಾರ ಬಂಗಾರಪೇಟೆ ವಿಕೋಟ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಗಡ್ಕರಿ ಅವರ ಬಳಿ ಚರ್ಚಿಸಲಾಗಿದೆ. ರಾಜ್ಯ ಸರ್ಕಾರ ಭೂಮಿಯನ್ನು ಹಸ್ತಾಂತರಿಸಿದರೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಮಲ್ಲಪ್ಪನ ಬೆಟ್ಟಕ್ಕೆ ರಸ್ತೆ ಬೇಕೆಂದು ಮನವಿ ಮಾಡಿದ್ದು, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹೈಮಾಸ್ಟ್ ದೀಪ ಮತ್ತು ಕುಡಿಯುವ ನೀರಿನ ಘಟಕಗಳ ನಿಮಾರ್ಣಕ್ಕೆ ಮುಖಂಡರು ಬೇಡಿಕೆ ಇಟ್ಟಿದ್ದು, ಸಿಎಸ್ಆರ್ ಅನುದಾನವನ್ನು ಸದ್ಬಳಸಿಕೊಂಡು ಸೌಕರ್ಯ ಕಲ್ಪಿಸಲಾಗುವುದು. ಸ್ವಯಂಸೇವಾ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ನನ್ನನ್ನು ಭೇಟಿಯಾಗಲಿದ್ದು, ಅವರ ಮೂಲಕ ಸೋಲಾರ್ ದೀಪಗಳ ಅಳವಡಿಕೆಗೆ ಪ್ರಯತ್ನ ಮಾಡಲಾಗುತ್ತದೆ ಎಂದು ಮಲ್ಲೇಶ್ ಬಾಬು ತಿಳಿಸಿದರು.
ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ರಾಜರೆಡ್ಡಿ, ಕೇತಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಶಶಿಧರ್ ರೆಡ್ಡಿ, ಮಾರ್ಕಂಡೇಗೌಡ, ಹನುಮಪ್ಪ, ತಿಪ್ಪಾರೆಡ್ಡಿ, ಸೀತಾರಾಮಪ್ಪ, ಪಾರ್ಥಸಾರಥಿ, ಶ್ರೀನಿವಾಸ್ ಮೂರ್ತಿ, ತಿಮ್ಮರೆಡ್ಡಿ, ನಾರಾಯಣಸ್ವಾಮಿ, ಬಾಲಕೃಷ್ಣ, ಎಲ್ಲಪ್ಪ, ಕಪಾಲಿ ಶಂಕರ್, ಮಂಜುನಾಥ್, ಬಾಲಚಂದ್ರ, ಚೌಡಪ್ಪ ಇದ್ದರು.