ಬೆಳಗಾವಿ: ಜನನ-ಮರಣ ಪ್ರಮಾಣಪತ್ರ ತಿದ್ದುಪಡಿ ಅಧಿಕಾರವನ್ನು ಜೆಎಂಎಫ್ ಕೋರ್ಟ್ ಬದಲಾಗಿ ಉಪವಿಭಾಗಾಧಿಕಾರಿಗೆ ವರ್ಗಾಯಿಸಿದ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಈ ಹೊಸ ನಿಯಮ ರದ್ದುಪಡಿಸಿ, ಮರಳಿ ಕೋರ್ಟ್ ವ್ಯಾಪ್ತಿಗೆ ಅಧಿಕಾರ ನೀಡುವಂತೆ ಒತ್ತಾಯಿಸಿ ನ್ಯಾಯವಾದಿಗಳು ಜಿಲ್ಲಾಡಳಿತದ ಮೂಲಕ ಶುಕ್ರವಾರ ಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜನನ-ಮರಣ ನೋಂದಣಿ ಕಾಯ್ದೆ-1969ಗೆ ಸರ್ಕಾರ 18-07-2022ರಂದು ಜಾರಿಗೊಳಿಸಿದ ಹೊಸ ನಿಯಮವು ಸಾರ್ವಜನಿಕ ಹಿತಾಸಕ್ತಿ ಹಾಗೂ ಮೂಲ ಕಾನೂನಿಗೆ ವಿರುದ್ಧವಾಗಿದೆ. ಈ ಮೊದಲು ನ್ಯಾಯಾಂಗ ದಂಡಾಧಿಕಾರಿ (ಜೆಎಂಎಫ್‌ಸಿ) ನ್ಯಾಯಾಧೀಶರ ನ್ಯಾಯಾಲಯಗಳು ಸಾರ್ವಜನಿಕರ ಸಮೀಪದಲ್ಲಿಯೇ ಲಭ್ಯವಿದ್ದು, ಸಾರ್ವಜನಿಕರಿಗೆ ಈ ನ್ಯಾಯಾಲಯಗಳ ಮೂಲಕ ಶೀಘ್ರಗತಿಯಲ್ಲಿ ಹಾಗೂ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತಿತ್ತು. ಉಪವಿಭಾಗಾಧಿಕಾರಿ ಕಚೇರಿಗಳು 2ರಿಂದ 3 ತಾಲೂಕಿಗೆ ಒಂದರಂತೆ ಲಭ್ಯವಿದೆ. ಆದ್ದರಿಂದ ಈ ತಿದ್ದುಪಡಿ ನಿಯಮದಿಂದಾಗಿ ನ್ಯಾಯಾಲಯಗಳಿಂದ ಜನಸಾಮಾನ್ಯರಿಗೆ ಸರಳವಾಗಿ ಸಿಗುತ್ತಿದ್ದ ನ್ಯಾಯ ದೂರವಾದಂತಾಗಿದೆ. ಉಪವಿಭಾಗಾಧಿಕಾರಿ ಹುದ್ದೆಗೆ ಈಗಾಗಲೇ ಬಹಳಷ್ಟು ಹೊಣೆಗಾರಿಕೆಗಳು ಇವೆ. ಇಲ್ಲಿ ಕೆಲಸದ ಒತ್ತಡದಿಂದಾಗಿ ಬಾಕಿ ಇರುವ ಕಡತಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಉಪವಿಭಾಗಾಧಿಕಾರಿಯು ಕಾರ್ಯಾಂಗ, ಶಾಸಕಾಂಗದ ವ್ಯಕ್ತಿಗಳ ನೇರ ಹಾಗೂ ಪರೋಕ್ಷ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ. ನ್ಯಾಯಾಧೀಶರಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲ. ತನ್ನ ಅಧೀನಕ್ಕೆ ಬರುವ ಜನನ ಹಾಗೂ ಮರಣ ನೋಂದಣಾಧಿಕಾರಿಗಳ ವಿರುದ್ಧ ಆದೇಶ ಮಾಡದೆ ಇರಬಹುದು. ಈ ತಿದ್ದುಪಡಿಯಿಂದ ಮತ್ತಷ್ಟು ಭ್ರಷ್ಟಾಚಾರ ಹೆಚ್ಚಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಸರ್ಕಾರ ಹೊಸ ತಿದ್ದುಪಡಿ ನಿಯಮ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಿದರು. ಬಸವರಾಜ ಒ.ಸಿ., ಸದಾಶಿವ ಹಿರೇಮಠ, ಸುಧೀರ ಜೈನ, ಆರ್.ಎಸ್.ಕಮತ, ಶಿವರಾಜ ನಸಲಾಪುರೆ, ಆರ್.ಸಿ. ಪಾಟೀಲ, ಆರ್.ಎಲ್.ಪಾಟೀಲ ಇತರರಿದ್ದರು.