ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿ.ಎಂ. ಜೈನೇಖಾನ, ಜಿ.ವಿ. ಕುಲಕರ್ಣಿ, ಸಿ.ಎ. ಖರಾಡೆ, ಎಲೆಸ್ ನಾಯಿಕ, ನಾಗಪ್ಪ ಸಂಗೊಳ್ಳಿ ಇತರರಿದ್ದರು. 
ಜಿಲ್ಲೆ

ಕೋರ್ಟ್ ಆದೇಶದಂತೆ ಸಮಾನ ವೇತನ ನೀಡಲು ಆಗ್ರಹ

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಅಗತ್ಯ ಬೆಲೆಗಳ ಮೇಲೆ ಜಿಎಸ್‌ಟಿ ಹೇರಿದ್ದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ದುಡಿಯುವ ಜನರಿಗೆ ಕನಿಷ್ಠ ವೇತನವಿಲ್ಲ. ವೈಜ್ಞಾನಿಕವಾಗಿ ಇಂದು ಕನಿಷ್ಠ ವೇತನ ನೀಡಬೇಕು. ಒಂದು ಕುಟುಂಬ ನಿರ್ವಹಣೆಗೆ ಸುಮಾರು 26 ಸಾವಿರ ರೂ. ಮಾಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಮಾಡಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರದ ಬೆಲೆ ಏರಿಕೆ ನೀತಿ ಖಂಡನೀಯ. ದೇಶದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 8 ವರ್ಷ ಆಗಿದೆ. ಆದರೆ, ದೇಶದಲ್ಲಿ ಅಚ್ಚೆ ದಿನಗಳು ಬಂದಿದ್ದು ಮಾತ್ರ ಬಂಡವಾಳ ಶಾಹಿಗಳಿಗೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆಹಾರ ಸಾಮಗ್ರಿಗಳ ಮೇಲೆ ಜಿಎಸ್‌ಟಿ ಹೇರಿದ್ದರಿಂದ ಜನರು ಬದುಕು ಸಾಗಿಸುವುದು ದುರ್ಬರವಾಗಿದೆ. ದೇಶದಲ್ಲಿ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿದರು. ಹಿಂದು ಕಾರ್ಯಕರ್ತರು ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡುತ್ತಾರೆ. ಮುಸ್ಲಿಂ ಯುವಕರು ಮೃತಪಟ್ಟರೆ ಪರಿಹಾರ ನೀಡುತ್ತಿಲ್ಲ. ಹಾಗಾಗಿ ಸರ್ಕಾರ ಕೋಮುವಾದಿತ್ವವನ್ನು ಪಾಲಿಸುತ್ತಿವೆ ಎಂದು ಆರೋಪಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.

ಜಿ.ಎಂ. ಜೈನೇಖಾನ, ಜಿ.ವಿ. ಕುಲಕರ್ಣಿ, ಸಿ.ಎ. ಖರಾಡೆ, ಎಲೆಸ್ ನಾಯಿಕ, ನಾಗಪ್ಪ ಸಂಗೊಳ್ಳಿ, ದಿಲೀಪ್ ವಾರ್ಕೆ, ಮಂದಾ ನೇವಗಿ, ನಿವಾಸ ಖೋತ, ಪರ್ವಿನ್ ನಾಯಕವಾಡಿ, ಶಿವಲೀಲಾ ಮಿಸಾಳೆ ಇದ್ದರು.