*ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎಂ.ಶಿವಣ್ಣ ಅಭಿಪ್ರಾಯ
*207ನೇ ಕೋರೆಗಾಂವ್ ವಿಜಯೋತ್ಸವ ಆಚರಣೆ
ಚಾಮರಾಜನಗರ: ಮಹಾರಾಷ್ಟ್ರದ ಭೀಮಾ ನದಿ ತೀರದಲ್ಲಿ ನಡೆದಿದ್ದ ಕೋರೆಗಾಂವ್ ಕದನ ದಲಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎಂ.ಶಿವಣ್ಣ ಹೇಳಿದರು.
ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ 207ನೇ ಭೀಮ ಕೋರೆ ಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೋರೆ ಗಾಂವ್ ಕದನದಲ್ಲಿ 28 ಸಾವಿರ ಪೇಶ್ವೆಗಳನ್ನು ಕೇವಲ 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ ವಾಗಿದೆ ಎಂದು ಹೇಳಿದರು.
ಕೋರೆ ಗಾಂವ್ ಕದನದಲ್ಲಿ 500 ಮಹಾರ್ ಸೈನಿಕರ ಪೈಕಿ 22 ಸೈನಿಕರು ವೀರ ಮರಣ ಹೊಂದುತ್ತಾರೆ. ಅವರ ನೆನಪಿಗಾಗಿ ಭೀಮನದಿ ತೀರದಲ್ಲಿ ವಿಜಯಸ್ಥಂಭ ಸ್ಥಾಪಿಸಲಾಗಿದ್ದು, ಪ್ರತಿವರ್ಷ ಕೋರೆಗಾಂವ್‌ಗೆ ಜ.1ರಂದು ಸುಮಾರು 5 ಲಕ್ಷದಿಂದ 6 ಲಕ್ಷದವರಗೆ ಜನರು ಸೇರುತ್ತಾರೆ ಎಂಬುದೇ ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಶಿವನಾಗಣ್ಣ, ಕಾರ್ಯದರ್ಶಿ ಸೋಮ ಸುಂದರ್, ಉಪಾಧ್ಯಕ್ಷ ಜಿ.ಮಹಾಲಿಂಗಯ್ಯ, ವಿ.ಕೃಷ್ಣ ರಾಜು, ಪದಾಧಿಕಾರಿಗಳಾದ ಎಂ.ನಿಂಗರಾಜು, ಶಿವಕುಮಾರ್, ಸಿದ್ದರಾಜು, ರವಿ, ಸುರೇಂದ್ರ ಕುಮಾರ್, ಪ್ರಸಾದ್, ರವಿ ನಾಗರತ್ನ, ಪುಟ್ಟ ಲಿಂಗಮ್ಮ ಹಾಗೂ ಇತರರು ಉಪಸ್ಥಿತರಿದ್ದರು.