ತುಮಕೂರು: ಶಾಸಕ ಡಿ.ಸಿ.ಗೌರಿಶಂಕರ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ತುಮಕೂರು ತಾಲೂಕು ಬಗರ್ಹುಕುಂ ಸಮಿತಿ ಸಭೆ ಕೋರಂ ಕೊರತೆಯಿಂದ ಮುಂದೂಡಿಕೆಯಾಗಿದ್ದು, ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರು ಮತ್ತಷ್ಟು ಕಾಯುವುದು ಅನಿವಾರ್ಯವಾಗಿದೆ. ತುಮಕೂರು ತಾಲೂಕು ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 11ಕ್ಕೆ ಕರೆದಿದ್ದ ಸಭೆಗೆ ಸಮಿತಿಯ ಮೂವರು ಸದಸ್ಯರು ಗೈರಾದ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದೆ. ಜೆಡಿಎಸ್ ಶಾಸಕರ ಅಧ್ಯಕ್ಷತೆಯ ಸಭೆಗೆ ಸರ್ಕಾರದಿಂದ ನಾಮನಿದೇರ್ಶಿತ ಸದಸ್ಯರು ಉದ್ದೇಶಪೂರ್ವಕವಾಗಿ ಗೈರಾಗುತ್ತಿದ್ದಾರೆ ಎಂಬ ಮಾತು ಕೇಳಿಬಂತು. ಸಭೆಯಲ್ಲಿ ವಲಯ ಅರಣ್ಯಾಧಿಕಾರಿಗಳು, ಪಶುಪಾಲನಾ ಇಲಾಖೆ ಆರೋಗ್ಯಾಧಿಕಾರಿ, ತಹಸೀಲ್ದಾರ್, ಆರ್ಐ ಸಭೆಯಲ್ಲಿ ಹಾಜರಿರಲು ಸೂಚನೆ ನೀಡಲಾಗಿತ್ತು. ಆದರೆ, ಬಹುತೇಕ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಶಾಸಕ ಡಿ.ಸಿ.ಗೌರಿಶಂಕರ್ ತಹಸೀಲ್ದಾರ್ ಮೋಹನ್ಕುಮಾರ್ಗೆ ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ತುಮಕೂರು ತಾಲೂಕು ಬಗರ್ಹುಕ್ಕುಂ ಸಮಿತಿಯಲ್ಲಿ ಸರ್ಕಾರದಿಂದ ದೊಡ್ಡನಾರವಂಗಲದ ಡಿ.ಎಸ್.ರುನಾಥ್, ನೆಲಹಾಳ್ನ ಎನ್.ನಟರಾಜು, ಹೊನ್ನುಡಿಕೆಯ ಎಚ್.ಪಿ.ಚಂದ್ರಕಲಾ ನಾಮನಿರ್ದೇಶಿತ ಸದಸ್ಯರಾಗಿದ್ದು ಸಭೆಗೆ ಗೈರಾಗಿರುವುದರ ಹಿಂದೆ ರಾಜಕೀಯ ಕಾರಣವಿದೆ ಎಂಬ ಗುಸುಗುಸು ತಾಲೂಕು ಕಚೇರಿ ಆವರಣದಲ್ಲಿ ಕೇಳಿಬಂತು. ತುಮಕೂರು ತಾಲೂಕಿನ ಬಹುತೇಕ ಅರ್ಜಿಗಳು ವಜಾಗೊಳಿಸಲಾಗಿದ್ದು 180ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಬಾಕಿಯಿದೆ. ಬಹುತೇಕ ಜಮೀನು ಬಗ್ಗೆ ಅರಣ್ಯ ಇಲಾಖೆ ತಕರಾರು ತೆಗೆದಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಜವಬ್ಧಾರಿ ಸಮಿತಿಯ ಮೇಲಿದೆ. ಆದರೂ ಪದೇಪದೇ ಸಭೆ ಮುಂದೂಡಿಕೆಯಾಗುತ್ತಿರುವುದು ಜಮೀನು ಸಾಗುವಳಿ ಚೀಟಿಗೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸಿದೆ.
ಬಗರ್ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದು ಅರ್ಜಿ ವಿಲೇವಾರಿಗೆ ಸೋಮವಾರ ನಡೆಯಬೇಕಿದ್ದ ಸಭೆ ಮುಂದೂಡಲಾಗಿದೆ. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರು ವ್ಯಯಕ್ತಿಕ ಕಾರಣದಿಂದ ಸಭೆಗೆ ಗೈರಾಗಿದ್ದು ಮುಂದಿನ ದಿನಾಂಕದಲ್ಲಿ ಸಭೆ ನಡೆಸುತ್ತೇವೆ. ಡಿ.ಸಿ.ಗೌರಿಶಂಕರ್ ಶಾಸಕ