ಚಾಮರಾಜನಗರ: ಜಿಲ್ಲೆಯಲ್ಲಿ ಕೋತಿಗಳ ಮಾರಣ ಹೋಮ ನಡೆದ ವಿಚಾರದ ನಡುವೆ ಕೋತಿಗಳ ಹಾವಳಿ ಚರ್ಚೆಗೆ ಬಂದಿದ್ದು, ರೈತರು ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆ ಬದಿಯಲ್ಲಿ ಇತ್ತೀಚೆಗೆ 18 ಕೋತಿಗಳ ಮಾರಣ ಹೋಮ ನಡೆದಿತ್ತು. ಎಲ್ಲೋ ಸೆರೆ ಹಿಡಿದ ಕೋತಿಗಳಿಗೆ ವಿಷಹಾಕಿ ಕೊಂದಿದ್ದ ದುಷ್ಕರ್ಮಿಗಳು ಅವುಗಳ ಕಳೇಬರಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದರು. ಈ ವಿಚಾರಕ್ಕೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ನಡುವೆ ಕೋತಿಗಳು ರೈತರಿಗೆ ಉಪಟಳ ನೀಡುವ ವಿಚಾರ ಚರ್ಚೆ ಮುನ್ನೆಲೆಗೆ ಬಂದು, ವಾನರರಿಂದ ರೈತಾಪಿ ವರ್ಗ ಹಾಗೂ ಹಲವಾರು ಗ್ರಾಮಗಳಲ್ಲಿ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕೋತಿಗಳು ರೈತರ ತೋಟಗಳಿಗೆ ನುಗ್ಗಿ ಎಳನೀರು ಹಾಗೂ ಮುಸುಕಿನ ಜೋಳದ ಸಲನ್ನು ಹಾಳುಮಾಡುತ್ತಿದೆ. ಮನೆಗಳ ಹೆಂಚುಗಳನ್ನು ಹಾನಿಗೊಳಿಸುವುದು, ಮನೆಗಳಿಗೆ ಲಗ್ಗೆ ಇಟ್ಟು ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದು, ಅಂಗಡಿಗಳಿಗೆ ನುಗ್ಗಿ ಸಾರ್ವಜನಿಕರಿಗೆ ನಿರಂತರವಾಗಿ ಕಿರಿಕಿರಿ ನೀಡುತ್ತಲೆ ಇರುತ್ತದೆ. ಅದಾಗ್ಯೂ ಅರಣ್ಯ ಇಲಾಖೆಯಾಗಲಿ, ಸ್ಥಳೀಯ ಆಡಳಿತವಾಗಲಿ ಇದಕ್ಕೆ ಪರಿಹಾರವನ್ನು ಕಂಡುಕೊಂಡಿಲ್ಲ. ಇದರಿಂದಾಗಿ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಈ ಸಂಬಂಧ ರೈತರಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
*ಕೋತಿಗಳ ಹಾವಳಿ ಹೆಚ್ಚಾಗಿದೆ
ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಜನರನ್ನು ಹೈರಾಣಗೊಳಿಸುತ್ತಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಕೋತಿಗಳು ಲಗ್ಗೆ ಇಟ್ಟು ಆಹಾರ ಪದಾರ್ಥಗಳನ್ನು ಎತ್ತೊಯ್ಯುತ್ತಿದೆ. ಮನೆಯ ಹೆಂಚುಗಳನ್ನು ಹಾನಿಗೊಳಿಸುತ್ತಿವೆ. ರೈತರ ಜಮೀನಿಗೆ ಲಗ್ಗೆ ಇಟ್ಟ ವೇಳೆ, ಓಡಿಸಲು ಪ್ರಯತ್ನಿಸಿದರೆ ಘರ್ಜಿಸುತ್ತವೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೋತಿಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವುದರತ್ತ ಗಮನಹರಿಸಬೇಕು.
ಅಮ್ಜಾದ್‌ಖಾನ್, ಅಧ್ಯಕ್ಷ, ರೈತ ಸಂಘ, ಹನೂರು
*ಸಲನ್ನು ನಾಶಪಡಿಸುತ್ತಿದೆ
ಅಜ್ಜಿಪುರ ಗ್ರಾಮದಲ್ಲಿ ಇತ್ತೀಚಿಗೆ ಕೋತಿಗಳ ಹಾವಳಿ ವಿಪರೀತವಾಗಿದ್ದು, ಅಂಗಡಿ ಹಾಗೂ ಮನೆಗಳಿಗೆ ಲಗ್ಗೆ ಇಟ್ಟು ಆಹಾರ ಪದಾರ್ಥವನ್ನು ಎತ್ತಿಕೊಂಡು ಹೋಗುತ್ತಿದೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರೈತರ ಜಮೀನಿಗಳಿಗೆ ಲಗ್ಗೆ ಇಟ್ಟು ತೆಂಗಿನಕಾಯಿ ಹಾಗೂ ಮುಸುಕಿನ ಜೋಳದ ಫಸಲನ್ನು ತಿಂದು ನಾಶಪಡಿಸುತ್ತಿವೆ. ಇದರಿಂದ ರೈತರು ತೊಂದರೆ ಉಂಟಾಗಿದೆ. ಆದ್ದರಿಂದ ಗ್ರಾ.ಪಂ ಅಧಿಕಾರಿಗಳು ಇತ್ತ ಗಮನಹರಿಸಿ ಕೋತಿಗಳ ಹಾವಳಿಯನ್ನು ತಡೆಗಟ್ಟಬೇಕು.
ಮುರುಡೇಶ್ವರಸ್ವಾಮಿ, ಅಜ್ಜಿಪುರ, ಹನೂರು
*ಕ್ರಮವಹಿಸದ ಅರಣ್ಯ ಇಲಾಖೆ
ಗ್ರಾಮದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದರಿಂದ, ಗ್ರಾಮಸ್ಥರೇ ಹಣವನ್ನು ಖರ್ಚುಮಾಡಿ ಹಿಡಿಸಿದ್ದರು. ಆದರೂ ಮತ್ತಷ್ಟೂ ಕೋತಿಗಳು ಗ್ರಾಮದ ಹೊರವಲಯದ ತೋಟಗಳಲ್ಲಿ ಉಪಟಳ ನೀಡುವದಲ್ಲದೇ ಮನೆಗಳ ಹೆಂಚು, ಸಾಮಾಗ್ರಿಗಳು, ಧವಸ-ಧಾನ್ಯ ಹಾಳು ಮಾಡುತ್ತಿದೆ. ಗದರಿಸಿದರೆ ದಾಳಿಗೆ ಮುಂದಾಗುತ್ತವೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವಹಿಸುವುದಿಲ್ಲ. ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಈ ಸಮಸ್ಯೆಯ ಬಗ್ಗೆ ದೂರಿದ್ದೇವೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಹೇಗಾದರೂ ಮಾಡಿ ಅರಣ್ಯ ಇಲಾಖೆ ಕೋತಿಗಳ ಹಾವಳಿ ತಡೆಗಟ್ಟಬೇಕು.
ಕವಿತಾ, ಮತ್ತೀಪುರ, ಕೊಳ್ಳೇಗಾಲ
*ಕೋತಿಗಳ ಸಂಖ್ಯೆ ನಿಯಂತ್ರಿಸಿ
ತಾಲೂಕಿನ ಕಾಡಂಚಿನ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಅಷ್ಟಿಷ್ಟು ತೆಂಗನ್ನು ನಾಶಮಾಡುತ್ತಿದೆ. ಈ ಬಗ್ಗೆ ದೂರು ನೀಡಿದರೂ ಅರಣ್ಯ ಇಲಾಖೆಯಾಗಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೋತಿಗಳನ್ನು ಹಿಡಿಸಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ಅವುಗಳ ಸಂತತಿ ನಿಯಂತ್ರಣ ಮಾಡಲು ಕ್ರಮಕೈಗೊಳ್ಳಬೇಕು.
ಮಾಧು, ಹಂಗಳ, ಗುಂಡ್ಲುಪೇಟೆ
*ಪರಿಹಾರವನ್ನಾದರೂ ನೀಡಿ
ನಿತ್ಯವೂ ತೋಟದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ತೆಂಗಿನ ಕಾಯಿಗಳನ್ನು ಕೇಳುತ್ತಿದೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಯಾವುದೇ ಕ್ರಮವಹಿಸಬೇಕು. ಇಲ್ಲವಾದರೆ ಅದಕ್ಕೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನಾದರೂ ಮಾಡಬೇಕು.
ಸೋಮಣ್ಣ, ರೈತ, ಗೌಡಹಳ್ಳಿ, ಯಳಂದೂರು
*ತೆಂಗು ಬೆಳೆಗಾರರಿಗೆ ನಷ್ಟ
ನಮ್ಮ ಭಾಗದಲ್ಲಿ ಕಳೆದ 4-5 ವರ್ಷಗಳಿಂದ ಕೋತಿಗಳ ಹಾವಳಿ ಹೆಚ್ಚಾಗಿದೆ. ಎಳನೀರನ್ನು ಕಿತ್ತು ಹಾಳುಮಾಡುವುದರಿಂದ, ಒಂದು ಕಾಯಿಯೂ ಕೈಗೆ ಸಿಗದಂತಾಗಿದೆ. ಇವುಗಳನ್ನು ಹಿಡಿಸಿ ಕಾಡಿಗೆ ಬಿಟ್ಟರೂ ಮತ್ತೆ ವಾಪಸ್ ಬರುತ್ತದೆ. ಇದರಿಂದಾಗಿ ತೆಂಗು ಬೆಳೆದ ರೈತರು ತುಂಬಾ ನಷ್ಟ ಅನುಭವಿಸುವಂತಾಗಿದೆ.
ಶಿವಕುಮಾರಸ್ವಾಮಿ, ತೆರಕಣಾಂಬಿ ಹುಂಡಿ, ಗುಂಡ್ಲುಪೇಟೆ
*ಗ್ರಾಮದತ್ತ ಮುಖ ಮಾಡುತ್ತಿವೆ
ಕುಂತೂರಿನಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ರೈತ ಬೆಳೆದ ಫಸಲನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಹಿಂಡು ಹಿಂಡು ಕೋತಿಗಳು ತೋಟಗಳ ಮೇಲೆ ದಾಳಿ ಮಾಡುತ್ತವೆ. ತೆಂಗಿನ ಮರಗಳಲ್ಲಿ ಒಂದು ಕಾಯನ್ನು ಬಿಡುವುದಿಲ್ಲ. ಇದರಿಂದ ಬಹಳ ಸಮಸ್ಯೆ ಉಂಟಾಗಿದೆ. ಕೋತಿಗಳ ಕಾಟ ತಾಳಲಾರದೆ ಊರಿನವರೇ ಹಿಡಿಸಿದ್ದರು. ಆದರೆ, ಬೇರೆ ಊರಿನವರು ಕುಂತೂರು ಬೆಟ್ಟಕ್ಕೆ ಕೋತಿಗಳನ್ನು ಹಿಡಿದು ಬಿಡುವುದರಿಂದ ಮತ್ತೆ ಗ್ರಾಮದತ್ತ ಮುಖ ಮಾಡುತ್ತಿವೆ. ಇದರ ಉಪಟಳ ನಿರಂತರವಾಗಿದೆ. ಅರಣ್ಯ ಇಲಾಖೆ ಹಾಗೂ ಪಂಚಾಯಿತಿ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ.
ನಂಜುಂಡಸ್ವಾಮಿ, ರೈತ ಮುಖಂಡ, ಕುಂತೂರು, ಕೊಳ್ಳೇಗಾಲ
*ನವಿಲನ ಕಾಟವೂ ಅಧಿಕ
ಇತ್ತೀಚೆಗೆ ತೋಟಗಳಲ್ಲಿ ಎಳನೀರು ಕೂಯ್ಲು ಮಾಡಿದ್ದಾರೆ. ಈ ನಡುವೆ ಕೋತಿಗಳು ಲಗ್ಗೆ ಇಟ್ಟು ಎಳನೀರು ಕಿತ್ತು ಹಾಳು ಮಾಡುತ್ತಿದೆ. ಊರಿಗೆ ಬಂದು ಮನೆಯ ಹೆಂಚುಗಳನ್ನು ನಾಶಗೊಳಿಸುತ್ತಿವೆ. ಜತೆಗೆ ನವಿಲಿನ ಕಾಟವೂ ವಿಪರೀತವಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಅರಣ್ಯ ಅಥವಾ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಏರ್‌ಗನ್‌ಗಳನ್ನು ನೀಡಬೇಕು. ಇದೊಂದೆ ಪರಿಹಾರವಾಗಿದ್ದು, ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ.
ವಿಜಯ್‌ಕುಮಾರ್, ರೈತ ಮುಖಂಡ, ಚಾಮರಾಜನಗರ
*ಅರಣ್ಯ ಇಲಾಖೆ ಜವಾಬ್ದಾರಿ ಇದೆ
ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಕೋತಿಗಳ ಹಾವಳಿ ನಿರಂತರವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಒಂದು ಕಡೆ ಗ್ರಾಮಸ್ಥರೆ ಹಣವನ್ನು ಹೊಂದಿಸಿ, ಕೋತಿಗಳನ್ನು ಹಿಡಿಸುತ್ತಿದ್ದಾರೆ. ಕೋತಿಗಳನ್ನು ಸಾಗಿಸುವ ಸಂದರ್ಭದಲ್ಲಿ ಮಾರಣಹೋಮ ಆಗಿರಬಹುದು ಅಥವಾ ಕಿಡಿಗೇಡಿಗಳು ವಿಷ ಹಾಕಿರಬಹುದು. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಕ್ಕೆ ತೆರಳಿ ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟರೇ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಇಲಾಖೆ ಕೇವಲ ಅರಣ್ಯದ ಪ್ರಾಣಿಗಳಿಗೆ ಮಾತ್ರ ಸಮೀತವಾಗಿದ್ದು, ಅರಣ್ಯದ ಹೊರಗು ಸಾಕಷ್ಟು ಪ್ರಾಣಿಗಳು ರೈತರಿಗೆ ಉಪಟಳ ನೀಡುತ್ತಿದೆ. ಈ ಕುರಿತು ಅಗತ್ಯ ಕ್ರಮವಹಿಸಬೇಕು.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯಾಧ್ಯಕ್ಷ, ಕಬ್ಬುಬೆಳೆಗಾರರ ಸಂಘ, ಚಾಮರಾಜನಗರ