ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಕಳೆದ 2 ತಿಂಗಳಿನಿಂದ ಕೋತಿಗಳ ಹಾವಳಿಯಿಂದ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಹೈರಾಣರಾಗಿದ್ದಾರೆ.
ಗ್ರಾಮದಲ್ಲಿ ಅದರಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಹೊಸ ಬಡಾವಣೆ, ಕೋಣನ ಮಾರಮ್ಮನ ಬೀದಿಯಲ್ಲಿ 2 ತಿಂಗಳಿನಿಂದ ಬೆಳಗ್ಗೆ ವೇಳೆ ಹಾಜರಾಗುವ ಕೋತಿಗಳ ಹಿಂಡು ರಂಪಾಟ ನಡೆಸುತ್ತಿವೆ. ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕೋತಿಗಳಿದ್ದು, ಸಾಕಷ್ಟು ದಾಂಧಲೆ ನಡೆಸುತ್ತಿವೆ. ಗ್ರಾಮದ ಮನೆಗಳ ಓಡಾಡುವ ವೇಳೆ ಹೆಂಚುಗಳನ್ನು ಹೊಡೆದು ಹಾಕುತ್ತಿವೆ. ಯಾರೂ ಇಲ್ಲದ ಮನೆಗಳಿಗೆ ನುಗ್ಗಿ ತಿಂಡಿ, ತಿನಿಸು ಹಾಗೂ ಆಹಾರ ಪದಾರ್ಥಗಳನ್ನು ಹೊತ್ತೊಯ್ಯುತ್ತಿವೆ. ಪಾತ್ರೆ ಪಗಡೆಗಳನ್ನು ಬಿಸಾಡುತ್ತಿದ್ದು, ನಷ್ಟ ಉಂಟು ಮಾಡುತ್ತಿವೆ.
ಭಯದ ವಾತಾವರಣ: ಮನೆಗಳ ಮೇಲೆ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದು, ಒಣಗಲು ಹಾಕಿರುವ ಬಟ್ಟೆಗಳನ್ನು ಸಹ ಎಳೆದೊಯ್ಯುತ್ತಿವೆ. ತೆಂಗಿನ ಮರಕ್ಕೇರಿ ಕಾಯಿಗಳನ್ನು ಮನೆಯ ಮೇಲೆ ಕೆಡವುತ್ತಿವೆ. ಮನೆಯ ಒಳಗಿಳಿಯಲು ಹೆಂಚುಗಳನ್ನು ತೆಗೆಯುತ್ತಿವೆ. ಈ ವೇಳೆ ಹೆಂಚುಗಳು ಮನೆಯ ಒಳಗೆ ಬೀಳುತ್ತವೆ. ಇದರಿಂದ ವೃದ್ಧರು, ಬಾಣಂತಿಯರು ಹಾಗೂ ಮಕ್ಕಳ ಇರುವ ಮನೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೋತಿಗಳ ಹಿಂಡು ಒಮ್ಮೆಲೆ ದಾಳಿ ಇಟ್ಟಿತ್ತೆಂದರೆ ಇಲ್ಲಿನ ನಿವಾಸಿಗಳಿಗೆ ಅವುಗಳನ್ನು ಓಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವೇಳೆ ಕೋತಿಗಳು ಜನರ ಮೇಲೆ ದಾಳಿಗೂ ಮುಂದಾಗುತ್ತಿವೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ: ಕೋತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಗ್ರಾಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಗ್ರಾಪಂ ಆಡಳಿತ ಇತ್ತ ಗಮನಹರಿಸುತ್ತಿಲ್ಲ. ಇದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಗ್ರಾಪಂ ಆಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಬೇಜವಾಬ್ದಾರಿ ಹೇಳಿಕೆ: ಈ ಸಂಬಂಧ ವಿಜಯವಾಣಿ ಪತ್ರಿಕೆ ಪಿಡಿಒ ದೊರೆಯಾ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಕಳೆದ 20 ದಿನದ ಹಿಂದೆ ಗ್ರಾಮಸ್ಥರು ಕೋತಿಗಳ ಹಾವಳಿ ಜಾಸ್ತಿಯಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗೆ ತಿಳಿಸಲಾಗಿದೆ. ಅದರೆ, ಅವರು ನಿರ್ಲಕ್ಷೃ ವಹಿಸಿದ್ದಾರೆ. ಅದಕ್ಕೆ ನಾನೇನು ಮಾಡಲಿ? ಎಂಬ ಉತ್ತರ ನೀಡಿದ್ದಾರೆ. ಅಂತೂ ಗ್ರಾಮದಲ್ಲಿ ಕೋತಿಗಳ ಹಾವಳಿಯಿಂದ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕಿದೆ.