ಜಿಲ್ಲೆ

ಕೋಡಿಮೋಳೆ ಕೆರೆಗೆ ಹರಿದ ನೀರು

ಚಾಮರಾಜನಗರ: ಕುಡಿಯುವ ನೀರಿನ ಉದ್ದೇಶದಿಂದ ಸುತ್ತೂರು ಏತ ನೀರಾವರಿ ಯೋಜನೆಯಡಿ ಕೋಡಿಮೋಳೆ ಕೆರೆಗೆ ಶನಿವಾರ ನೀರು ಹರಿಯಿತು.

ತಾಲೂಕಿನ ಕೋಡಿಮೋಳೆ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದ್ದು, ನೀರಿಲ್ಲದೇ ಬರಿದಾಗಿದ್ದ ಕೆರೆಗೆ ಜೀವ ಕಳೆ ಬಂದಂತಾಗಿದೆ. ಕೋಡಿಮೋಳೆ ಕೆರೆಯು ಸುಮಾರು 68.23 ಎಕರೆ ವಿಸ್ತೀರ್ಣವಿದ್ದು, 1200 ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗುತ್ತಿದೆ. ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೋಡಿಮೋಳೆ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 3.74 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕೆರೆಯ ಹೂಳನ್ನು ತೆಗೆದಿರುವುದರಿಂದ ಹೆಚ್ಚಿನ ನೀರು ಸಂಗ್ರಹವಾಗಲು ನೆರವಾಗಲಿದೆ.

ಚಾಮರಾಜನಗರ ಮತ್ತು ಯಳಂದೂರು ತಾಲೂಕಿನ 22 ಕೆರೆಗಳ ಪೈಕಿ ಒಂದಾಗಿರುವ ಕೋಡಿಮೋಳೆ ಕೆರೆಗೆ ಶನಿವಾರದಿಂದ ನೀರು ಹರಿಸಲಾಗುತ್ತಿದ್ದು, ಕೋಡಿಮೋಳೆ ಕೆರೆ ತುಂಬಿ ಕೋಡಿಬಿದ್ದರೇ ಸರಗೂರು ಮೋಳೆ ಕೆರೆ, ಹೊಮ್ಮದ ಕೆರೆ ಹಾಗೂ ಇನ್ನಿತರೆ ಕೆರೆಗಳಿಗೆ ನೀರು ಹರಿಯಲಿದೆ.

ಈಗಾಗಲೇ ಸಾಕಷ್ಟಿ ದಿನಗಳ ಕಾಲ ಮಳೆಯಾಗಿದ್ದರೂ, ಯಾವುದೇ ಕೆರೆಯಲ್ಲೂ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ರೈತರು ಕೋಡಿಮೋಳೆ ಕೆರೆಗೆ ನೀರು ತುಂಬಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಪ್ರಸ್ತುತ ಕೋಡಿಮೋಳೆ ಕೆರೆಗೆ ನೀರು ಹರಿಯುತ್ತಿರುವದರಿಂದ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೋಡಿಮೋಳೆ ಕೆರೆಗೆ ನೀರು ತುಂಬಿಸುವುದರಿಂದ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲವಾಗುವಂತೆ ಅಂತರ್ಜಲವೂ ವೃದ್ಧಿಯಾಗಲಿದೆ.

ಈಗಾಗಲೇ ಕೋಡಿಮೋಳೆ ಕೆರೆಯಲ್ಲಿ ಪಂಪ್‌ಹೌಸ್ ನಿರ್ಮಿಸಲಾಗಿದ್ದು, ಮುಂದಿನ ಹಂತದಲ್ಲಿ ಇಲ್ಲಿಂದ ನೀರನ್ನು ಮೇಲಕ್ಕೆತ್ತಿ ನಾಗವಳ್ಳಿ ಕೆರೆ, ನಲ್ಲೂರು ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ಹರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಾರೆಯಾಗಿ ಕೋಡಿಮೋಳೆ ಕೆರೆಗೆ ನಿರಂತರವಾಗಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಮ್ ವಿಜಯವಾಣಿಗೆ ಮಾಹಿತಿ ನೀಡಿದರು.

ಈಗಾಗಲೇ ಸುತ್ತೂರು ಕಬಿನಿ ನದಿ ಮೂಲದಿಂದ ಕೋಡಿಮೋಳೆ ಕೆರೆಗೆ ಶನಿವಾರದಿಂದ ನೀರು ಹರಿಸಲಾಗುತ್ತಿದೆ. ಇಂದಿನಿಂದ ನಿರಂತರವಾಗಿ ಪೈಪ್‌ಲೈನ್ ಮೂಲಕ ಕೋಡಿಮೋಳೆ ಕೆರೆಗೆ ನೀರು ಹರಿಯಲಿದೆ.

-ಜಯರಾಮ್, ಎಇಇ, ಕಾವೇರಿ ನೀರಾವರಿ ನಿಗಮ, ಚಾಮರಾಜನಗರ