ಜಿಲ್ಲೆ

ಕೋಡಿ ಹರಿಯುವ ಮಾರ್ಗದಲ್ಲಿ ಸೇತುವೆ ನಿರ್ಮಿಸಿ

ಕಂಪ್ಲಿ: ಸಣಾಪುರ ಗ್ರಾಪಂ ಕಚೇರಿ ಬಳಿ ವಿಜಯನಗರ ಕಾಲುವೆ ಕೆಳಭಾಗದ ಕೋಡಿ ನೀರು ಹರಿದು ಹೋಗುವ ಮಾರ್ಗದಲ್ಲಿ ಸೇತುವೆ ನಿರ್ಮಿಸುವಂತೆ ರೈತರು ಒತ್ತಾಯಿಸಿದ್ದಾರೆ.

ವಿಜಯನಗರ ಕಾಲುವೆ ಅಭಿವೃದ್ಧಿಪಡಿಸುವಾಗ ನಂ.3 ಸಣಾಪುರ ಗ್ರಾಪಂ.ಕಚೇರಿ ಬಳಿಯ ಕಿರು ಸೇತುವೆಯಿಂದ ಕಾಲುವೆಯ ಕೆಳಭಾಗದ ಸುಮಾರು 30 ಮೀ. ಅಭಿವೃದ್ಧಿಗೊಳಿಸಿಲ್ಲ. ಕಾಲುವೆ ನೀರು ದಡದಿಂದ ಕೋಡಿ ಬಿದ್ದು ಸೋರಿ ರಸ್ತೆಗೆ ಹರಿಯುತ್ತಿದೆ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರಿಂದ ರಸ್ತೆ ಹದಗೆಟ್ಟಿದೆ ಎಂದು ರೈತರು ದೂರಿದ್ದಾರೆ.

ಕೃಷಿ ಚಟುವಟಿಕೆಗೆ ಬಿತ್ತನೆಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ಸಾಗಿಸಲು ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಕಾಲುವೆ ಬಳಿ ಕೋಡಿ ನೀರು ಹರಿದು ಹೋಗಲು ರಸ್ತೆಗೆ ಪೈಪ್ ಹಾಕಿದ್ದು ಸಮರ್ಪಕವಾಗಿಲ್ಲ. ಇದರ ಬದಲಿಗೆ ಸೇತುವೆ ನಿರ್ಮಿಸಬೇಕು ಎಂದು ನಂ.3 ಸಣಾಪುರ ಗ್ರಾಮದ ರೈತರಾದ ಕೆ.ಚಂದ್ರಶೇಖರ, ರಾಜಕುಮಾರ್ ಪಾಟೀಲ್, ಕನಕಗಿರಿ ರೇಣುಕಪ್ಪ, ಮಂಜುನಾಥಗೌಡ, ಒಂಟಿ ನಾಗರಾಜ, ಎಂ.ವೀರೇಶ, ಒಂಟಿ ಚಾಗಪ್ಪ ಇತರರು ಒತ್ತಾಯಿಸಿದ್ದಾರೆ.