ಕೋಲಾರ: ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆಯಾಗಿದ್ದು, ಕೋಲಾರ-ಚಿಂತಾಮಣಿ ಮುಖ್ಯರಸ್ತೆಯ ಅರಹಳ್ಳಿ ಸಮೀಪದ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾದರೆ ಎಸ್. ಅಗ್ರಹಾರ ಕೆರೆ ಕೋಡಿ ಹರಿದಿದೆ.
ಕೋಲಾರ ನಗರದಲ್ಲಿ ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಸುಮಾರು 3.45ರ ವೇಳೆಗಾಗಲೇ ಭಾರಿ ಮೋಡ ಮುಚ್ಚಿಕೊಂಡು ಕತ್ತಲಾದಂತಾಗಿತ್ತಾದರೂ ಜಡಿ ಮಳೆಗಷ್ಟೇ ಸೀಮಿತವಾಯಿತು.
ನಿರಂತರವಾಗಿ ಜಡಿ ಮಳೆ ಸುರಿಯುತ್ತಿದ್ದುದರಿಂದ ನಗರದಲ್ಲಿ ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಜನಸಂಚಾರ ದುಸ್ತರವಾಗಿತ್ತು. ಕೆಇಬಿ ಸಮುದಾಯ ಭವನದ ಬಳಿ ಚರಂಡಿ ತುಂಬಿ ರಸ್ತೆಯಲ್ಲೇ ಹರಿಯುತ್ತಿದ್ದರೆ, ಅಂತರಗಂಗೆ ರಸ್ತೆಯ ಕುವೆಂಪು ಉದ್ಯಾನದ ಚರಂಡಿ ನಿರ್ಮಾಣವೂ ಪ್ರಗತಿಯಲ್ಲಿದ್ದು, ಕೊಚ್ಚೆ ನೀರು ಮೂರ್ನಾಲ್ಕು ಅಡಿ ಆಳದಷ್ಟು ನಿಂತಿದೆ, ಮಳೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಕಾಮಗಾರಿ ಪ್ರಗತಿಯಲ್ಲಿರುವ ಕಡೆ ತೆರೆದ ಸ್ಥಿತಿಯಲ್ಲಿರುವ ಚರಂಡಿ ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಕೋಲಾರ-ಚಿಂತಾಮಣಿ ಮಾರ್ಗದ ಅರಹಳ್ಳಿ ಸಮೀಪದ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಯಿತು. ತುಂಬಿದ್ದ ನೀರಿನ ನಡುವೆಯೂ ಸಂಚರಿಸಿದ ಕಾರು ಮಧ್ಯದಲ್ಲಿ ಸಿಲುಕಿದ್ದರಿಂದ ಸ್ಥಳೀಯ ಮಕ್ಕಳು ತಳ್ಳಲು ಹರಸಾಹಸ ಪಟ್ಟರು. ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆಯಲ್ಲೂ ಸಾಧಾರಣ ಮಳೆ ಸುರಿದಿದೆ. ಎಸ್. ಅಗ್ರಹಾರ ಕೆರೆ ಬುಧವಾರ ಸಂಜೆ ಸುಮಾರು 6.30ರ ವೇಳೆ ಕೋಡಿ ಹರಿದಿದೆ.
ಸಿಡಿಲು ಬಡಿದು ಮನೆ ಜಖಂ: ಟೇಕಲ್‌ನಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಮಳೆಗೆ ಗೋಪಸಂದ್ರ ಗ್ರಾಮದ ಎಂ.ಆರ್.ನಾರಾಯಣಸ್ವಾಮಿ ಎಂಬುವವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಸಿಡಿಲಿನ ರಭಸಕ್ಕೆ ಪಿಒಪಿ ಹಾಗೂ ಮನೆ ಒಳಗೋಡೆ ಸೀಳಿದ್ದು, ಮೇಲ್ಛಾವಣಿ ಕಿತ್ತು ಬಂದಿದೆ. ಬುಧವಾರ ಸ್ಥಳಕ್ಕೆ ತಹಸೀಲ್ದಾರ್ ಎಂ.ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೇಕಲ್ ನಾಡಕಚೇರಿ ಉಪತಹಸೀಲ್ದಾರ್ ಜಗನ್ನಾಥರೆಡ್ಡಿ, ಆರ್‌ಐ ಮುನಿಸ್ವಾಮಿಶೆಟ್ಟಿ, ಪಿಡಿಒ ಬಾಬುಶೇಷಾದ್ರಿ ಉಪಸ್ಥಿತರಿದ್ದರು.
ಮರ ಬಿದ್ದು ಸಂಚಾರ ಅಸ್ತವ್ಯಸ್ತ: ಕೋಲಾರ ತಾಲೂಕಿನ ವೇಮಗಲ್ನಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಕೆರೆ ಕುಂಟೆಗಳಿಗೆ ಅಲ್ಪ-ಸ್ವಲ್ಪ ನೀರು ಸಂಗ್ರಹವಾಗಿದೆ. ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ. ಮಳೆ ರಭಸಕ್ಕೆ ವೇಮಗಲ್ ಹೋಬಳಿಯ ಕುರುಬರಹಳ್ಳಿ ಗೇಟ್‌ನ ಹಾಸ್ಟೆಲ್ ಮುಂಭಾಗ ಭಾರಿ ಗಾತ್ರದ ಮರ ಉರುಳಿದ ಕಾರಣ ವೇಮಗಲ್-ನರಸಾಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕೆಲ ತಿಂಗಳಿಂದ ಕೆಸಿ ವ್ಯಾಲಿ ನೀರು ಕೆರೆಗೆ ಹರಿಯುತ್ತಿದ್ದು, ಪೂರ್ಣ ತುಂಬುವ ಮುನ್ನವೇ ಮುಂದಿನ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ತೂಬು ತೆರೆಯಲಾಗಿತ್ತು. ಇತ್ತೀಚೆಗೆ ಈ ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಕೋಡಿ ಹರಿದಿದೆ. ನಾಗರಾಜ್, ರೈತ ಸಂಘದ ಮುಖಂಡ