ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠಕ್ಕೆ ಭಾನುವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪತ್ನಿ ಕನ್ನಿಕಾ ಪರಮೇಶ್ವರಿ ಅವರ ಜತೆ ಆಗಮಿಸಿ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಜತೆಗೆ, ಶ್ರೀ ಶಿವಲಿಂಗಜ್ಜಯ್ಯ ಹಾಗೂ ನೀಲಮಜ್ಜಯ್ಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ತಂದೆಯವರ ಕಾಲದಿಂದಲೂ ಭೇಟಿ ನೀಡುವ ಪರಿಪಾಠ ರೂಢಿಸಿಕೊಂಡು ಬಂದಿದ್ದೇವೆ. ಇಂದಿನ ಭೇಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಬರಬೇಕು ಎನಿಸಿದ್ದರಿಂದ ಬಂದಿದ್ದೇನೆಯೇ ಹೊರತು ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ಕಳೆದೊಂದು ವಾರದ ಹಿಂದೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪತ್ನಿ ಸಮೇತ ಆಗಮಿಸಿ ಆಶೀರ್ವಾದ ಪಡೆದಿದ್ದರು.ದಲಿತ ಮುಖ್ಯಮಂತ್ರಿ ಕೂಗೆದ್ದಿರುವ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.