ಗುಂಡ್ಲುಪೇಟೆ: ಮಳೆಯಿಂದ ಹಾನಿಗೀಡಾದ ಪ್ರದೇಶಗಳು ಹಾಗೂ ತುಂಬಿ ಹರಿಯುತ್ತಿರುವ ಕೆರೆಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಗಾಯತ್ರಿ ಜತೆಗೂಡಿ ಭೇಟಿ ನೀಡಿದ ಡಿಸಿ, ನಿರಂತರ ಮಳೆಯಿಂದ ಜಲಾವೃತವಾಗಿದ್ದ ತಾಲೂಕಿನ ಬೇಗೂರು ಹೋಬಳಿಯ ತಗ್ಗಲೂರು, ಕೋಟೆಕೆರೆ, ಬೆಳಚಲವಾಡಿ ಮುಂತಾದ ಗ್ರಾಮಗಳಲ್ಲಿ ಗೋಡೆ ಕುಸಿತ, ಬೆಳೆಗಳು, ಕುರುಬರಹುಂಡಿ ರಸ್ತೆಯಲ್ಲಿ ಮನೆಗಳು ಹಾಗೂ ರಸ್ತೆಗಳನ್ನು ಪರಿಶೀಲಿಸಿದರು. ನಂತರ ತುಂಬಿ ಹರಿಯುತ್ತಿರುವ ಬೆಳಚಲವಾಡಿ ಮತ್ತು ಕೋಟೆಕೆರೆ ಕೆರೆಗಳಿಗೆ ಭೇಟಿ ನೀಡಿದರು.
ಕೂಡಲೇ ಸಂತ್ರಸ್ತರಿಗೆ ಪರಿಹಾರ ಮತ್ತು ಮನೆ ಕಟ್ಟಿಕೊಳ್ಳಲು ನೆರವು ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ತಹಸೀಲ್ದಾರ್ ರವಿಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್, ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.