ಬೀದರ್: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡಬೇಕು ಎಂಬ ಹಕ್ಕೊತ್ತಾಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರು ಶುಕ್ರವಾರ ಮಂಡಿಸಿದರು.
ನಗರದಲ್ಲಿ ಜಿಲ್ಲಾ ವಕೀಲರ ಸಂಘಕ್ಕೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿ, ನ್ಯಾಯಾಲಯಗಳಲ್ಲಿ ಕನ್ನಡ ಅರ್ಜಿ ಸಲ್ಲಿಸುವುದು, ಕನ್ನಡ ನಮೂನೆ ಬಳಕೆ, ವಾದ ಮಂಡಿಸುವುದು ಹಾಗೂ ನ್ಯಾಯಾಧೀಶರು ತೀರ್ಪುಗಳನ್ನು ಕನ್ನಡದಲ್ಲೇ ನೀಡಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಕೋರಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಧನರಾಜ ಬಿರಾದಾರ ಮಾತನಾಡಿ, ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಈಗಾಗಲೇ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆಗೆ ಸೂಚಿಸಿದ್ದಾರೆ. ಇದರಂತೆ ಹಲವು ವಕೀಲರು ಕನ್ನಡದಲ್ಲಿ ವಾದ ಮಂಡಿಸುತ್ತಿದ್ದಾರೆ. ಕೆಲ ನ್ಯಾಯಾಧೀಶರು ಸಹ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದಾರೆ ಎಂದರು.
ಕನ್ನಡ ಜಾಗೃತಿ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವೆಂಬರ್ 1ರಿಂದ ಬರುವ ಅಕ್ಟೋಬರ್ 31ರವರೆಗೆ ಕನ್ನಡ ಕಾಯಕ ವರ್ಷ ಹಮ್ಮಿಕೊಂಡಿದೆ. ನ್ಯಾಯಾಂಗ, ಆಡಳಿತ, ಶಿಕ್ಷಣ, ವಾಣಿಜ್ಯ ಸೇರಿ ಎಲ್ಲ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡ ಸಂಪೂರ್ಣವಾಗಿ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ನ್ಯಾಯಾಧೀಶರು, ವಕೀಲರು ಕೈಜೋಡಿಸಲು ಕೋರಿದರು.
ನ್ಯಾಯವಾದಿಗಳಾದ ಮಹಾದೇವ ಪಾಟೀಲ್, ವೀರಶೆಟ್ಟಿ ಭೆಂಡೆ, ಕೆ.ಎಚ್. ಪಾಟೀಲ್, ಬಿ. ಕೃಷ್ಣಪ್ಪ, ಬಿ.ರಮೇಶ, ಜಯಕುಮಾರ ಕಾಂಗೆ, ಸಂಘಟನೆ ಮುಖಂಡರಾದ ಎಂ.ಪಿ.ಮುದಾಳೆ, ಶ್ರೀಮಂತ ಸಪಾಟೆ, ಸುನೀಲ ಭಾವಿಕಟ್ಟಿ, ರವಿ ಕಾಂಬ್ಳೆ ಇತರರಿದ್ದರು.