ಚಿತ್ರದುರ್ಗ: ನಗರದ ಕೋಟೆ ಆವರಣದಲ್ಲಿ ಯೋಗಾಭ್ಯಾಸ ಹಾಗೂ ವಾಯು ವಿಹಾರಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಕೋಟೆ ವಾಯುವಿಹಾರಿಗಳ ಸಂಘದ ಸದಸ್ಯರು ಮಂಗಳವಾರ ಮನವಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾ ಪ್ರಭು ಅವರಿಗ ಸಲ್ಲಿಸಿದರು.
ಅಂದು ಸಂಜೆ ಕೋಟೆಗೆ ಭೇಟಿ ನೀಡಿದ್ದ ಡಿಸಿಗೆ ಸಂಸ್ಥೆ ಹಾಗೂ ಸಂಘದ ಸದಸ್ಯರು ಪ್ರತ್ಯೇಕ ಮನವಿ ಸಲ್ಲಿಸಿ, ಬೆಳಗ್ಗೆ 6ರಿಂದ 8ರವರೆಗೆ ಹಾಗೂ ಸಂಜೆ 4ರಿಂದ 5ರವರೆಗೆ ವಾಯು ವಿಹಾರ ಹಾಗೂ ಯೋಗಭ್ಯಾಸಕ್ಕಾಗಿ ಸ್ಥಳೀಯರಿಗೆ ಕೋಟೆಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಹಲವು ವರ್ಷಗಳಿಂದ ಕೋಟೆ ಮದ್ದುಬೀಸುವ ಕಲ್ಲು ಆವರಣದಲ್ಲಿ ಯೋಗ,ಪ್ರಾಣಾಯಾಮ ಹಾಗೂ ಧ್ಯಾನ ಉಚಿತ ತರಬೇತಿ ಕೊಡ ಲಾಗುತ್ತಿದ್ದು,ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿತ್ತು. ಆದರೆ ನಂತರದಲ್ಲಿ ಪುರಾತತ್ವ ಇಲಾಖೆ ಯೋಗಭ್ಯಾಸ ಮತ್ತು ವಾಯು ವಿಹಾರಕ್ಕೆ ಬರುವಂಥ ವರ ಪ್ರವೇಶಕ್ಕೆ ಏಕಾಏಕಿ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಇದರಿಂದ ಸ್ಥಳೀಯರಿಗೆ ತುಂಬಾ ತೊಂದರೆಯಾಗಿದೆ ಎಂದರು.
ಮನವಿ ಆಲಿಸಿದ ಡಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಆರ್.ಸತ್ಯಣ್ಣ,ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್,ಮಲ್ಲಿಕಾರ್ಜುನಾಚಾರ್,ನಾಗರಾಜ್, ಮಂಜುಳಾ,ಲಲಿತಾ ಬೇದ್ರೆ,ವಸಂತಲಕ್ಷ್ಮೀ,ಉಮಾಪತಿ ಮತ್ತಿತರರು ಇದ್ದರು.