ಬಾಗಲಕೋಟೆ: ರಾಜ್ಯದಲ್ಲಿ ೨ನೇ ಹಂತದಲ್ಲಿ ನಡೆಯುವ ೧೪ ಕ್ಷೇತ್ರಗಳ ಚುನಾವಣೆಯಲ್ಲಿ ದಿಗ್ವಿಜಯ ಸಾಽಸುವ ಸಂಕಲ್ಪದೊಂದಿಗೆ ಮತಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಗಲಕೋಟೆಯಲ್ಲೂ ಕಾಂಗ್ರೆಸ್ ವಿರುದ್ಧ ಗರ್ಜಿಸಿದ್ದಾರೆ.
ಬಾಗಲಕೋಟೆ ತೋಟಗಾರಿಕೆ ವಿವಿ ಬಳಿಯ ವಿಶಾಲವಾದ ಮೈದಾನದಲ್ಲಿ ಸಹಸ್ರಾರು ಜನರು ಮೋದಿ ಮೋದಿ, ಜೈ ಶ್ರೀರಾಮ, ಬೋಲೋ ಭಾರತ್ ಮಾತಾ ಕೀ ಜೈ ಎನ್ನುವ ಮುಗಿಲು ಮುಟ್ಟುವ ಘೋಷಣೆಗಳ ನಡುವೆ ಭಾಷಣ ಮಾಡಿದ ನಮೋ, ಕಾಂಗ್ರೆಸ್ ವಿರುದ್ಧ ಅಬ್ಬರಿಸಿದರು. ಕರ್ನಾಟಕದಲ್ಲಿ ವಸೂಲಿ ಗ್ಯಾಂಗ್ ಆಡಳಿತ ನಡೆಸುತ್ತಿದೆ. ಖಜಾನೆಗೆ ಹಣ ಬರುತ್ತಿದ್ದಂತೆ ಲೂಟಿ ಹೊಡೆದು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಲೂಟಿಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ ಎಂದೂ ಆರೋಪಿಸಿದರು.
ಬೆಂಗಳೂರಲ್ಲಿ ಕುಡಿವ ನೀರಿನ ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ. ಅದರಲ್ಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಾದರೂ ಅವರಿಗೆ ತೃಪ್ತಿ ಇಲ್ಲ. ಕೋಟ್ಯಂತರ ಮೊತ್ತದ ಹಗರಣ ಮಾಡುವ ಕನಸನ್ನು ಕಾಂಗ್ರೆಸ್ ನವರು ಕಾಣುತ್ತಿದ್ದಾರೆ. ರಾಜ್ಯ ಲೂಟಿ ಹೊಡೆಯುವವರಿಗೆ ಮೇ ೭ ರಂದು ಶಿಕ್ಷೆ ಆಗಬೇಕಲ್ಲವೆ ಎಂದು ಹೇಳಿದರು.
೨೦೨೪ರ ಲೋಕಸಭೆ ಚುನಾವಣೆ ಭಾರತದ ಭವಿಷ್ಯ ನಿರ್ಧರಿಸುವ ಚುನಾವಣೆ ಆಗಿದೆ. ವಿಕಸಿತ ಭಾರತ ನಿರ್ಮಾಣ, ಆತ್ಮನಿರ್ಭರ್ ಚುನಾವಣೆ ಇದಾಗಿದೆ. ಭಾರತ ಕೆಲವೇ ವರ್ಷಗಳಲ್ಲಿ ವಿಶ್ವದ ೩ನೇ ಆರ್ಥಿಕ ಶಕ್ತಿ ಆಗಲಿದೆ. ಇದನ್ನು ಯಾರು ಮಾಡುತ್ತಾರೆ ಎಂದು ಮೋದಿ ಪ್ರಶ್ನಿಸಿದಾಗ, ಸಹಸ್ರಾರು ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಆಗ ಮೋದಿ ಅವರು, ನಾನಲ್ಲ. ನಿಮ್ಮ ಮತ ಅದನ್ನು ಮಾಡಲಿದೆ. ನಿಮ್ಮ ಆ ಒಂದು ಮತ ನನಗೆ ಶಕ್ತಿ ನೀಡಲಿದೆ ಎನ್ನುವ ಮೂಲಕ ಈ ಸಲ ಮತ್ತೊಮ್ಮೆ ಬಿಜೆಪಿಗೆ ನಿಮ್ಮ ಮತ ಇರಲಿ ಎಂದು ಕರೆ ನೀಡಿದರು.