ಚಿತ್ರದುರ್ಗ: ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಬರದ ಜಿಲ್ಲೆಯಾದ ಕೋಟೆನಾಡು ಪ್ರಸ್ತುತ ದಿನಗಳಲ್ಲಿ ಕ್ಷೀಡಾ ಕ್ಷೇತ್ರದಲ್ಲಿ ಸಾಧನೆಗೈಯುವ ಮೂಲಕ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕತಾರ್‌ನ ದೋಹಾದಲ್ಲಿ ಅ.18ರಿಂದ 28ರವರೆಗೆ ನಡೆಯಲಿರುವ ಏಷಿಯನ್ ಪುರುಷರ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸಲಿರುವ ಚಿತ್ರದುರ್ಗ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಕ್ರೀಡಾಪಟು ಸುಜಾ ಉರ್ ರೆಹಮಾನ್‌ಗೆ ವಿ.ಪಿ.ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗೌರವಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರ ಮುಂದುವರಿಯುತ್ತಿದೆ ಎಂಬುದಕ್ಕೆ ಈ ಆಯ್ಕೆಯೇ ಸಾಕ್ಷಿಯಾಗಿದೆ. ಈ ಹಿಂದೆ ಚಿತ್ರದುರ್ಗ ಕಲೆ, ಸಾಹಿತ್ಯದಲ್ಲಿ ಶ್ರೀಮಂತಿಕೆ ಹೊಂದಿ ಹೆಸರಾಗಿತ್ತು. ಆ ಗತವೈಭವ ಮರುಕಳಿಸಬೇಕು. ಯಾವುದೇ ಕ್ಷೇತ್ರದಲ್ಲಾಗಲಿ ಕೋಟೆನಾಡಿನ ಜನ ಸಾಧನೆಗೈಯಬೇಕು ಎಂದು ಸಲಹೆ ನೀಡಿದರು.
ರವಿಶಂಕರ್‌ರೆಡ್ಡಿ ಅವರು ಡಿಡಿಪಿಐ ಆದ ನಂತರ ಚಿತ್ರದುರ್ಗ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ನಿಜಕ್ಕೂ ಮೆಚ್ಚುವಂತದ್ದು. ರೆಹಮಾನ್ ಕೂಡ ನಮ್ಮ ನಾಡಿಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಡಿಡಿಪಿಐ ರವಿಶಂಕರ್‌ರೆಡ್ಡಿ ಮಾತನಾಡಿ, ಯಾವುದೇ ಗ್ರಾಮದಲ್ಲಾಗಲಿ ಜನರನ್ನು ಬಹಿಷ್ಕರಿಸುವುದು ಪ್ರಜಾಪ್ರಭುತ್ವ ಕಗ್ಗೊಲೆಯಾದಂತೆ. ಇದಕ್ಕೆ ಯಾರೂ ಆಸ್ಪದ ಕೊಡಬಾರದು. ಇಂತಹ ದುರ್ಘಟನೆ ನಡೆದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಮಾನವೀಯ ವರ್ತನೆ ಬದಲು ಮಾನವೀಯ ಮೌಲ್ಯಗಳೊಂದಿಗೆ ದೇಶ ಕಟ್ಟುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.
ಸಂಸ್ಥೆ ಉಪಾಧ್ಯಕ್ಷ ಜಯಣ್ಣ, ಕಾರ್ಯಾಧ್ಯಕ್ಷ ಕೆ.ಎಚ್.ಶಿವರಾಮು, ಖಜಾಂಚಿ ಪ್ರೇಮಾನಂದ್, ವೆಂಕಟೇಶ್ ಶ್ರೇಷ್ಠಿ, ಮುಖ್ಯಶಿಕ್ಷಕ ಸುರೇಶ್, ಶಿಕ್ಷಕಿಯರಾದ ಸುಕನ್ಯಾ, ರಾಧಾಮಣಿ, ಸರಸ್ವತಿ, ಅಮಿನಾಭಿ, ರಶ್ಮಿ, ಯಶೋಧಾ ಇತರರಿದ್ದರು.