ಬಾಗಲಕೋಟೆ: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಗುರುವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಬೆಳಗ್ಗೆ ಜಿಲ್ಲೆಯ ವಿವಿಧ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಳೆದ ಒಂದು ತಿಂಗಳಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ವೃತವನ್ನು ಮುಕ್ತಾಯಗೊಳಿಸಿದರು. ವಿಶೇಷ ಈದ್ ಪ್ರಾರ್ಥನೆಯ ನಂತರ ಮಕ್ಕಳು, ಯುವಕರು, ಹಿರಿಯರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಹೊಸ ಬಟ್ಟೆ ಧರಿಸಿ ಮಕ್ಕಳು, ಯುವಕರು, ಮಹಿಳೆಯರು, ವೃದ್ಧರು ಸಂಭ್ರಮಿಸಿದರು. ಬಂದು ಬಾಂಧವರು, ಆತ್ಮೀಯರು, ಸ್ನೇಹಿತರಿಗೆ ಹಬ್ಬದ ಪ್ರಯುಕ್ತ ತಯಾರಿಸಲಾಗಿದ್ದ ಸುರಕುಂಬ ಮತ್ತು ವಿವಿಧ ವಿಶೇಷ ಖಾದ್ಯಗಳನ್ನು ಉಣಬಡಿಸಿದರು. ಅಲ್ಲದೆ ಪರಸ್ಪರ ಶುಭಾಶಯ ವಿನಿಮಯ ಮಾಡಿದರು. ಪ್ರಾರ್ಥನೆ ಸಲ್ಲಿಸಿದ ನಂತರ ವಿವಿಧ ಮಸೀದಿ, ಈದ್ಗಾ ಮೈದಾನದ ಹೊರ ಭಾಗದಲ್ಲಿ ಧಾನ ಮಾಡಲಾಯಿತು.
ಬಾಗಲಕೋಟೆ ನಗರದಲ್ಲಿ ಮುಸ್ಲಿಂ ಸಮುದಾಯದವರು ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ನವನಗರದ ಈದ್ಗಾ ಮೈದಾನದಲ್ಲಿ, ಬಾದಾಮಿ ನಗರದ ಈದ್ಗಾ ಮೈದಾನದಲ್ಲಿ ರಾಜಕೀಯ ಮುಖಂಡರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.