ಜಿಲ್ಲೆ

ಕೋಟೆನಾಡಿನ ಜನರ ಪ್ರೀತಿ-ವಿಶ್ವಾಸಕ್ಕೆ ಋಣಿ

ಚಿತ್ರದುರ್ಗ: ರಾಜ್ಯದಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಕೋಟೆನಾಡಿನ ಜನರ ಪ್ರೀತಿ-ವಿಶ್ವಾಸ ಜೀವನದಲ್ಲೇ ಮರೆಯಲಾಗದ ಮಧುರ ಕ್ಷಣ ಎಂದು ಧಾರವಾಡ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮನದಾಳದ ಸಂತಸ ವ್ಯಕ್ತಪಡಿಸಿದರು.

ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ನಾಗರಿಕ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಜೀವನದಲ್ಲಿ ಜನನ-ಮರಣ ನಿಶ್ಚಿತ. ಆದರೆ, ಇದರ ಮಧ್ಯೆ ಜನಸೇವೆ ಮತ್ತು ಸಾಧನೆಯೊಂದೆ ಶಾಶ್ವತ. ಹಿಂದುಳಿದ ಜಿಲ್ಲೆ ಚಿತ್ರದುರ್ಗಕ್ಕೆ ಡಿಸಿಯಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಕವಾಡಿಗರಹಟ್ಟಿ ಪ್ರಕರಣ ನಡೆದಾಗ ಹಗಲಿರುಳು ಎನ್ನದೇ ಕೆಲಸ ಮಾಡಿದ್ದು, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಕೂಡ ಮರೆಯಲಾರೆ ಎಂದರು.

ಯಾರೇ ಉತ್ತಮ ಕಾರ್ಯ ಮಾಡಿದರೂ ಭಗವಂತ ಒಂದಲ್ಲೊಂದು ರೀತಿ ಫಲ ಕೊಡುತ್ತಾನೆ. ಅಧಿಕಾರಿಗಳಲ್ಲಿ ಜನಸೇವೆಯ ಗುಣವಿರಬೇಕು. ಡಿಸಿಯಾದಾಗ ಬಡವರ, ಜನಸಾಮಾನ್ಯರ ಸಮಸ್ಯೆಗಳಿಗೆ ಹತ್ತಿರವಿದ್ದು, ಕೈಲಾದಷ್ಟು ಒಳ್ಳೆಯದು ಮಾಡಬಹುದು. ಹಾಗಾಗಿ ರಾಜ್ಯದಲ್ಲಿ ಎಲ್ಲೇ ಅಧಿಕಾರಿಯಾದರೂ ಚಿತ್ರದುರ್ಗಕ್ಕೆ ಒಳಿತಾಗುವ ಸಂದರ್ಭ ಬಂದರೆ, ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವರ್ಗಾವಣೆ ಆದಾಗ ಅಧಿಕಾರಿಗಳು, ಸಿಬ್ಬಂದಿ ಬೀಳ್ಕೊಡುಗೆ ನೀಡುವುದು ಸಹಜ. ಆದರೆ, ಈ ಜಿಲ್ಲೆಯ ಜನ ಅಭೂತಪೂರ್ವ ಕಾರ್ಯಕ್ರಮದ ಮೂಲಕ ಬೀಳ್ಕೊಟ್ಟಿದ್ದನ್ನು ಈವರೆಗೂ ನೋಡಿಲ್ಲ. ತಮಿಳುನಾಡು ತವರು ಮನೆಯಾದರೂ ಚಿತ್ರದುರ್ಗ ನನ್ನ ತವರೆಂದು ಹೆಮ್ಮೆಯಿಂದ ಎಲ್ಲಿ ಬೇಕಾದರೂ ಹೇಳುತ್ತೇನೆ. ನಿಷ್ಠೆ, ಕಾಳಜಿಯಿಂದ ಜನಸೇವೆ ಮಾಡಿದಾಗ ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯಬಹುದು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ವಿ.ವಿ.ಜೋತ್ಸ್ನಾ ಮಾತನಾಡಿ, 5 ವರ್ಷಗಳ ಹಿಂದೆ ನಾನೂ ಚಿತ್ರದುರ್ಗದ ಡಿಸಿಯಾಗಿ ಕೆಲಸ ಮಾಡಿದ್ದೇನೆ. ಈಗಲೂ ಜಿಲ್ಲೆಯ ಜನ ನನ್ನ ಮೇಲಿಟ್ಟಿರುವ ಅಭಿಮಾನ, ಪ್ರೀತಿ ಮರೆಯುವುದಿಲ್ಲ. ಇಲ್ಲಿ ಕೆಲಸ ಮಾಡುವಾಗ ಎಲ್ಲರ ಸಹಕಾರ ಸಿಕ್ಕಿದೆ. ಆದರೆ, ದಿವ್ಯಾಪ್ರಭು ಅವರಿಗೆ ನೀಡಿದ ಬೀಳ್ಕೊಡುಗೆ ಎಲ್ಲಿಯೂ ನೋಡಿಲ್ಲ. ಇದೊಂದು ಸೆಲೆಬ್ರೆಟಿ ಮಾದರಿಯಲ್ಲಿ ನಡೆದಿದೆ. ಇವರು ಮೃದು ಸ್ವಭಾವ ಹೊಂದಿದ್ದರೂ ತೆಗೆದುಕೊಳ್ಳುವ ನಿರ್ಧಾರ ಕಠಿಣ. ಹೀಗಾಗಿ ಹೆಸರು ಗಳಿಸಿದ್ದಾರೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು-ಮೇವಿನ ಕೊರತೆಯಿದೆ. ನೂತನ ಜಿಲ್ಲಾಧಿಕಾರಿ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಿವ್ಯಾಪ್ರಭು ಧೀರತನದ ಮಹಿಳೆ. ಐಎಫ್‌ಎಸ್‌ಗೆ ಆಯ್ಕೆಯಾಗಿ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ, ಛಲದಿಂದ ಐಎಎಸ್ ಅಧಿಕಾರಿಯಾದರು. ರಾಜ್ಯದ ಹಲವೆಡೆ ಕಾರ್ಯನಿರ್ವಹಿಸಿ, ಚಿತ್ರದುರ್ಗ ಡಿಸಿಯಾಗಿ ಸೇವೆ ಸಲ್ಲಿಸಿ, ಧಾರವಾಡಕ್ಕೆ ವರ್ಗಾವಣೆಯಾಗಿದ್ದಾರೆ. ಅಲ್ಲಿಯೂ ಅವರ ಜನಸೇವೆ ಮುಂದುವರೆಯಲಿ. ಸ್ತ್ರೀ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಉತ್ತಮ ನಿದರ್ಶನ ಎಂದು ಬಣ್ಣಿಸಿದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಜನಸೇವೆ ಜನಾರ್ದನನ ಸೇವೆಯಿದ್ದಂತೆ. ಅದರಂತೆ ದಿವ್ಯಾಪ್ರಭು ನಡೆದುಕೊಂಡಿದ್ದಾರೆ. ಕವಾಡಿಗರಹಟ್ಟಿ ಪ್ರಕರಣ ಸಮರ್ಥವಾಗಿ ನಿಭಾಯಿಸಿದರು. ಇಂತಹ ಅಧಿಕಾರಿಗಳಿಂದ ಸರ್ಕಾರಕ್ಕೂ ಹೆಸರು ಬರಲಿದೆ ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ದಿವ್ಯಾಪ್ರಭು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಅದೇ ರೀತಿ ನೂತನ ಡಿಸಿ ಅವರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಹಿಂದುಳಿದ, ಬರಪೀಡಿತ ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸಿ ಹೆಸರು ಗಳಿಸಲಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಜಿಲ್ಲೆಗೆ ಹಿಂದೆ ಎಸಿಯಾಗಿ, ಈಗ ಡಿಸಿಯಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ದಿವ್ಯಾಪ್ರಭು ಅವರು ಇಲ್ಲಿ ಜನಮೆಚ್ಚಿದ ಡಿಸಿಯಾಗಿದ್ದರು ಎಂಬುದಕ್ಕೆ ಈ ಕಾರ್ಯಕ್ರಮವೇ ನಿದರ್ಶನ ಎಂದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕಾ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯ ಬಿ.ಎ.ಲಿಂಗಾರೆಡ್ಡಿ, ಜಿಪಂ ಮಾಜಿ ಸದಸ್ಯ ನರಸಿಂಹರಾಜು ಇತರರಿದ್ದರು.