ಬಾಗಲಕೋಟೆ ಅಲಾಯಿ ದೇವರು ಮಂಗಳವಾರ ಬೆಳಗ್ಗೆಯಿಂದಲೇ ಮೆರವಣಿಗೆ ವಾದ್ಯಗಳ ಮುಖಾಂತರ ಸಾಗಿದವು. 
ಜಿಲ್ಲೆ

ಕೋಟೆನಾಡಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ

ಬಾಗಲಕೋಟೆ: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಕಳೆದ 5 ದಿನಗಳಿಂದ ಜರುಗಿತು, ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬದ ಸಂಭ್ರಮ ಮುಕ್ತಾಯಗೊಂಡಿತು. ಸಹಸ್ರಾರು ಭಕ್ತರು ಅಲಾಯಿ ದೇವರಿಗೆ ನಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮುಸ್ಲಿಂ ಸಮುದಾಯಕ್ಕಿಂತ ಹೆಚ್ಚಾಗಿ ಹಿಂದೂಗಳೆ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷ. ಮನೆಯಿಂದ ಚೂಂಗೆ, ಹೋಳಿಗೆ ಮಾಡಿಕೊಂಡು ದೇವರಿಗೆ ಅರ್ಪಿಸಿದರು.
ಎಲ್ಲೆಡೆ ಮೊಹರಂ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಭಾಗದಲ್ಲಿ ಹಿಂದೂ-ಮುಸ್ಲಿಂರ ಜೊತೆ ಜೊತೆಯಾಗಿ ಅಲಾಯಿ ದೇವರನ್ನು(ಪಾಂಜಾ) ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಸಕ್ಕರೆ, ಬೆಲ್ಲ ಸಮರ್ಪಿಸಿ ಹಂಚಿದರು. ಶಾಂತಿ, ನಮ್ಮದಿ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು. ಬೀದಿ ಬೀದಿ, ಗಲ್ಲಿಗಲ್ಲಿಗಳಲ್ಲಿ `ಆಲಿ ದೂಲಾ' ಎನ್ನುವ ಘೋಷಣೆ ಮೊಳಗಿದವು.
ತಾಶ್ಯಾ ನಾದಕ್ಕೆ ಹುಲಿ ವೇಷಧಾರಿಗಳ, ಮಕಳು ಆಕರ್ಷಕ ಹೆಜ್ಜೆ ಹಾಕಿದರು, ನೆರೆದಿದ್ದ ಜನತೆಗೆ ಸೀಳ್ಳೆ, ಚಪ್ಪಾಳೆಗಳ ಮೂಲಕ ಹುಲಿ ವೇಷಧಾರಿಗಳಿಗೆ ಪ್ರೋತ್ಸಾಹಿಸಿದರು. ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು ಓಡಾಡುತ್ತಿದ್ದ ಅಳ್ಳೊಳ್ಳಿ ಬಾವಾಗಳ ಭರ್ಜರಿ ಹೆಜ್ಜೆ ರೋಮಾಂಚನಗೊಳಿಸಿತು.
ಹುಲಿ ಹಾಗೂ ಅಳ್ಳೊಳ್ಳಿ ಬಾವಾಗಳ ಕಂಡ ತಕ್ಷಣ ಚಿಕ್ಕಮಕ್ಕಳು ಮನೆಯಿಂದ ಆಚೆ ಬಂದು ವೀಕ್ಷಿಸುವುದರ ಜೊತೆಗೆ ಗಲ್ಲಿಯಲ್ಲಿ ಅವರ ಹಿಂದಿಂದೆ ತೆರಳುತ್ತಿರುವ ದೃಶ್ಯ ಕಂಡು ಬಂದಿತು. ಹುಲಿ, ಅಳ್ಳೊಳ್ಳಿ ಬಾವಾಗಳ ಹೆಜ್ಜೆ-ಗೆಜ್ಜೆನಾದಕ್ಕೆ ಮಕ್ಕಳು ಕೂಡಾ ಸಾಥ ನೀಡಿ ಕುಣಿದು ಕುಪ್ಪಳಿಸಿದರು. ಕವ್ವಾಲಿ, ಶಾಹಿರಿ ಪದಗಳ ಹಾಡುಗಳು ರಿಂಗಣೀಸಿತು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬದ ಆಚರಣೆಯನ್ನ ಸಂಪನ್ನಗೊಳಿಸಲಾಯಿತು.

ಬಾಗಲಕೋಟೆ ನಗರದಲ್ಲಿ ಮೊಹರಂ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಗರದ ಗಲ್ಲಿ ಗಲ್ಲಿಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಮಂಗಳವಾರ ಬೆಳಗ್ಗೆಯಿಂದಲೇ ಮೆರವಣಿಗೆ ವಾದ್ಯಗಳ ಮುಖಾಂತರ ಸಾಗಿದವು. ಮಧ್ಯಾಹ್ನದ ವೇಳೆಗೆ ವಲ್ಲಾಬಾಯಿ ಚೌಕ್ ಹತ್ತಿರ ಅಲಾಯಿ ದೇವರು ಸಮಾಗಮಗೊಂಡವು. ಈ ವೇಳೆ ಧಾರ್ಮಿಕ ವಿವಿಧಾನಗಳನ್ನು ತಾಶ್ಯಾ ಭಾರಿಸುವ ಮೂಲಕ ನೆರವೇರಿಸಲಾಯಿತು. ಅಲಾಯಿ ದೇವರ ವಿಸರ್ಜನೆ ಮಾಡುವ ಮೂಲಕ ಹಿಂದೂ -ಮುಸ್ಲಿಂ ಭಾವೈಕ್ಯೆ ಸಾರುವ ಮೊಹರಂ ಹಬ್ಬ ನಗರದಲ್ಲಿ ಸಂಭ್ರಮದ ತೆರೆ ಕಂಡಿತು.