ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯದಂತೆ ಎಳ್ಳ ಅಮವಾಸ್ಯೆ ಚರಗ ಚಲ್ಲುವ ಸಂಪ್ರದಾಯ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶುಕ್ರವಾರ ಜರುಗಿತು.
ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಕಲಾದಗಿ, ರಬಕವಿ-ಬನಹಟ್ಟಿ, ಹುನಗುಂದ, ಇಳಕಲ್ಲ, ಗುಳೇದಗುಡ್ಡ ಸೇರಿದಂತೆ ಜಿಲ್ಲಾದ್ಯಂತ ಬೆಳಗ್ಗೆಯಿಂದ ರೈತಾಪಿ ಕುಟುಂಬಗಳು ಚರಗ ಚಲ್ಲಿ ಭೂತಾಯಿಗೆ ವಂದಿಸಿದರು. ಕಷ್ಟ, ನಷ್ಟದ ನಡುವೆಯೂ ಅನ್ನದಾತರು ತಮ್ಮ ಕುಟುಂಬದೊಂದಿಗೆ ಹೊಲಕ್ಕೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸುವುದನ್ನು ಬಿಡಲಿಲ್ಲ.
ಸಂಪ್ರದಾಯದಂತೆ ಬಂಧುಗಳು, ಸ್ನೇಹಿತರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಚರಗ ಚೆಲ್ಲಿದರು. ಎಳ್ಳು ಅಮವಾಸ್ಯೆ ನಿಮಿತ್ತ ಬೆಳಗ್ಗೆಯಿಂದಲೇ ರೈತ ಕುಟುಂಬದ ಮಹಿಳೆಯರು ಬಗೆ ಬಗೆಯ ತಿಂಡಿ, ತಿನಿಸುಗಳ ಬುತ್ತಿಕಟ್ಟಿಕೊಂಡು ಹೊಲಗಳಿಗೆ ತೆರಳಿದರು. ಅಲ್ಲಿ ಬನ್ನಿ ಗಿಡಕ್ಕೆ ಸೀರೆ ಉಡಿಸಿ, ಹುಲ್ಲಿಲ್ಗೊ, ಚಳ್ಳಂಬ್ರಿಗೂ ಎಂದು ಸುತ್ತು ಹಾಕುತ್ತ ಚರಗ ಚಲ್ಲಿದರು. ಮುತ್ತÊೆದೆಯರಿಗೆ ಉಡಿ ತುಂಬಿದರು.
ನಂತರ ಕುಟುಂಬ ಸದಸ್ಯರು ಬಂಧುಗಳ ಜೊತೆಗೆ ಸೇರಿ ಜೋಳ, ಸಜ್ಜಿಯ ರೊಟ್ಟಿ, ಕಾಳು ಪಲ್ಲೆ, ಎಣ್ಣಿಗಾಯಿ, ಬಗೆ ಬಗೆಯ ಚಟ್ನಿ, ಮೊಸರು, ಎಳ್ಳು, ಶೆಂಗಾ ಹೋಳಿಗೆ, ಕಡುಬು, ತುಪ್ಪ, ಸಂಡಿಗೆ ಉಪ್ಪಿನಕಾಯಿ, ಅನ್ನ ಸಾಂಬರ್ ಸವಿದು ಸಂಭ್ರಮಿಸಿದರು. ಹಿರಿಕರ ಕಾಲದಿಂದಲೂ ಭೂಮಿ ತಾಯಿಗೆ ಹಾಗೂ ಬೆಳೆದು ನಿಂತ ಬೆಳೆಗೆ ಪೂಜೆ ಸಲ್ಲಿಸುತ್ತ ಬರುವುದು ಸಂಪ್ರದಾಯ. ಹೀಗಾಗಿ ರೈತರ ನಮ್ಮ ಸಂಕಷ್ಟ ದೂರವಾಗಲಿ, ವರುಣ ದೇವ ಕೃಪೆ ತೋರಲಿ ಎಂದು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.