ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ರೈತರ ಪಾಲಿಗೆ ದೊಡ್ಡಬ್ಬ ಎಂದೆ ಕರೆಯುವ ಎಳ್ಳ ಅಮವಾಸ್ಯೆ ಸಂಭ್ರಮ ಜಿಲ್ಲಾದ್ಯಂತ ಮನೆ ಮಾಡಿತ್ತು. ಹಿಂಗಾರು ಬೆಳೆ ತುಂಬಿಕೊAಡಿರುವ ಜಮೀನುಗಳಲ್ಲಿ ಬೆಳೆಗಳು ಉತ್ತಮ ಇಳುವರಿ ಕೊಟ್ಟು ರೈತರನ್ನು ಕಾಪಾಡಲಿ ಎಂದು ಭೂತಾಯಿಗೆ ಪೂಜೆ ಸಲ್ಲಿಸಿ ಚರಗ ಸಲ್ಲಿಸಿ ನಮಿಸಿದರು.
ಎಳ್ಳ ಅಮವಾಸ್ಯೆಯನ್ನು ವಿಶೇಷವಾಗಿ ರೈತರ ಹಬ್ಬವೆಂದು ಕರೆಯುತ್ತಾರೆ. ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಬಗೆ ಬಗೆಯ ಆಹಾರ ಪದಾರ್ಥ ತಯಾರಿಸಿದ ರೈತ ಕುಟುಂಬದವರು ಎತ್ತಿನ ಬಂಡೆ, ವಾಹನಗಳಲ್ಲಿ ಕುಟುಂಬ ಸದಸ್ಯರು, ಸ್ನೇಹಿತರನ್ನು ಕರೆದುಕೊಂಡು ಜಮೀನುಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಕಡೆಗಳಲ್ಲಿ ಹೊಲಗಳು ಸಮೀಪದಲ್ಲಿ ಇದ್ದವರು ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ತಲೆ ಮೇಲೆ ಭಕ್ಷ್ಯಭೋಜ್ಯ ಇರುವ ದೊಡ್ಡ ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕುತ್ತಿದ್ದರು. ಅವರೊಂದಿಗೆ ಮಕ್ಕಳ ಸಂಭ್ರಮದಿAದ ತೆರಳುತ್ತಿದ್ದರು.
ರೈತರು ತಮ್ಮ ಜಮೀನುಗಳಲ್ಲಿ ಹಿಂಗಾರು ಪೈರುಗಳ ನಡುವೆ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಹಾಗೆಯೇ ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ಪೂಜೆ ನೆರವೇರಿಸಿ ಬಳಿಕ ಭೂತಾಯಿಗೆ ಚರಗ ಚೆಲ್ಲಿದರು. ಬೆಳೆಗಳಿಗೆ ಸುತ್ತು ಹಾಕುತ್ತ ಚರಗ ಚೆಲ್ಲುವ ಕಾರ್ಯದಲ್ಲಿ ಕುಟುಂಬರ ಮಹಿಳೆಯರು, ಮಕ್ಕಳು ಸಾಥ್ ನೀಡಿದರು.
ಇನ್ನು ಎಳ್ಳ ಅಮವಾಸ್ಯೆ ಮರ‍್ನಾಲ್ಕು ದಿನಗಳು ಇರುವಾಗಲೇ ಹತ್ತಿಪ್ಪತ್ತು ಜನರಿಗೆ ಆಗುವಷ್ಟ ಬಗೆ ಬಗೆಯ ಸಿಹಿ ತಿನಿಸುವ, ವಿವಿಧ ಚಟ್ನಿಗಳನ್ನು ತಯಾರಿಸಿದ್ದ ರೈತ ಕುಟುಂಬದವರು ಸೋಮವಾರ ದೊಡ್ಡ ದೊಡ್ಡ ಬುಟ್ಟೆಗಳನ್ನು ತೆರೆದಾಗ ಎಲ್ಲರ ಬಾಯಲ್ಲೂ ನೀರದೇ ಇರಲಿಲ್ಲ.
ಖಡಕ್ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಕಾಳಿನ ಪಲ್ಲೆ, ಎಣಗಾಯಿ ಪಲ್ಲೆ, ಇಟ್ಟಿನ ಪಲ್ಲೆ, ಕೆಂಪು ಚಟ್ನಿ, ಶೇಂಗಾ, ಅಗಸಿ, ಗುರೆಳ್ಳು ಚಟ್ನಿ, ಕೆನೆ ಮೊಸರು, ಶೇಂಗಾ, ಎಳ್ಳು ಹೋಳಿಗೆ, ಹೂರಣ ತುಂಬಿದ ಹೋಳಿಗೆ, ಕರ್ಚಿಕಾಯಿ, ತುಪ್ಪು, ಹಪ್ಪಳ, ಸಂಡಿಗೆ, ಅನ್ನ ಸಾಂಬರ್ ಹೀಗೆ ಏನುಂಟು ಏನಿಲ್ಲ, ಒಂದಾ ಎರಡಾ ಯಾವುದು ತಿನ್ನಲಿ, ಯಾವುದು ಬಿಡಲಿ ಎನ್ನುವಷ್ಟು ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಂದಿದ್ದರು. ಅಷ್ಟೆ ಅಲ್ಲ, ಹಬ್ಬಕ್ಕೆ ಕರೆದುಕೊಂಡು ಹೋಗಿದ್ದವರು ಅಷ್ಟನ್ನು ತಿನ್ನುವವರೆಗೂ ಬಿಡದೇ ಮತ್ತೆ ಮತ್ತೆ ತಟ್ಟೆಗೆ ಹಾಕುತ್ತ ತಮ್ಮ ಪ್ರೀತಿಯ ಊಟವನ್ನು ಬಡೆಸುವುದು, ಅದನ್ನು ನೋಡುವುದೆ ಚಂದವಾಗಿತ್ತು.
ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಗಾರು ಬೆಳೆ ಇರುವ ಎಲ್ಲ ರೈತರು ಹೀಗೆ ಎಳ್ಳ ಅಮವಾಸ್ಯೆ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಇರುವ ಬೆಳೆಗಳಿಗೆ ಚರಗ ಚಲ್ಲಿದರು. ಪ್ರಸಕ್ತ ವರ್ಷ ಉತ್ತಮ ಮಳೆ ಬಂದು ಬೆಳೆಗಳು ಚನ್ನಾಗಿ ಬೆಳೆದಿರುವುದರಿಂದ ರೈತರಿಗೆ ಹಬ್ಬದ ಸಂಭ್ರಮ ಇಮ್ಮಡಿ ಆಗಿತ್ತು. ಹೀಗಾಗಿ ರೈತರು ತಮ್ಮ ಕುಟುಂಬ ಸದಸ್ಯರು ಮಾತ್ರವಲ್ಲದೇ ಜಮೀನು ಇಲ್ಲದೇ ಸ್ನೇಹಿತರು, ಅಕ್ಕಪಕ್ಕದ ಮನೆಯವರನ್ನು ಚರಗ ಚೆಲ್ಲಲು ಕರೆದುಕೊಂಡು ಹೋಗಿ ಇಡೀ ದಿನ ಜಮೀನಿನಲ್ಲಿ ಬೆಳೆಗಳ ನಡುವೆ ಓಡಾಡಿಕೊಂಡು, ಹೊಟ್ಟೆ ತುಂಬ ಬಗೆ ಬಗೆಯ ಆಹಾರ ಪದಾರ್ಥ ಸವೆದು, ಸಂಜೆ ಜಮೀನಿನಿಂದ ಮರಳಿ ಬರುವಾಗಿ ಹೊಲದಲ್ಲಿ ಇದ್ದ ಕಡಲೆ ಗಿಡ ಕಿತ್ತುಕೊಂಡು ದಾರಿಯುದ್ದಕ್ಕೆ ಕಡಲೆ ತಿನ್ನುತ್ತ ಮನೆಗಳ ಕಡೆಗೆ ಹೋಗುತ್ತಿದ್ದರು.
ಇನ್ನು ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಡಾ.ಚಂದ್ರಶೇಖರ ಕಾಳಣ್ಣವರ ಜಮೀನಿನಲ್ಲಿ ೪೦ ರಿಂದ ೫೦ ಜನರನ್ನು ಚರಗ ಚಲ್ಲಲು ಆಹ್ವಾನಿಸಿದ್ದರು. ಸಾಹಿತಿಗಳು, ಜಾನಪದ ಕಲಾವಿದರನ್ನು ಕರೆಸಿ, ಎಳ್ಳ ಅಮವಾಸ್ಯೆ ಸಂಭ್ರಮಕ್ಕೆ ಜಾನಪದ ಗೀತೆಗಳನ್ನು ಆಲಿಸುವ ಮತ್ತು ಹಾಡುವ ಅವಕಾಶವನ್ನು ಒದಗಿಸಿದ್ದು, ಹೋಗಿದ್ದವರಿಗೆ ಹೆಚ್ಚಿನ ಸಂಭ್ರಮ ನೀಡಿತ್ತು.