ಬಾಗಲಕೋಟೆ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ.  
ಜಿಲ್ಲೆ

ಕೋಟೆನಾಡಲ್ಲಿ ಈದ್ ಮಿಲಾದ್ ಸಂಭ್ರಮ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಪ್ರವಾದಿ ಮಹಮ್ಮದರ ಜನ್ಮದಿನೋತ್ಸವದ ಜಶ್ನ-ಎ-ಈದ್ ಮಿಲಾದುನ್ನಬಿ ಅಂಗವಾಗಿ ಸೋಮವಾರ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆ ನಡೆಸಿದರು. ಅಲ್ಲದೆ ಬಡವರಿಗೆ, ರೋಗಿಗಳಿಗೆ ಆಹಾರ ಕಿಟ್ ವಿತರಿದರು.

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರ , ಮುಧೋಳ, ಜಮಖಂಡಿ, ಬೀಳಗಿ, ರಬಕವಿ-ಬನಹಟ್ಟಿ, ತೇರದಾಳ, ಲೋಕಾಪುರ, ಬಾದಾಮಿ, ಹುನಗುಂದ, ಇಳಕಲ್ಲ, ಕಮತಗಿ ಸೇರಿದಂತೆ ಎಲ್ಲೆಡೆ ಈದ್ ಮಿಲಾದ್ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೆರವಣಿಗೆಯಲ್ಲಿ ಕವ್ವಾಲಿ, ಶಾಹಿರಿ ನುಡಿಗಳು ಮೊಳಗಿದವು. ಹಬ್ಬದ ಅಂಗವಾಗಿ ಮಕ್ಕಳು, ಹಿರಿಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್‌ಮಿಲಾದ್ ದಿನದಂದು ಜಿಲ್ಲೆಯಲ್ಲಿ ಹಿಂದು-ಮುಸ್ಲಿಂರು ಪರಸ್ಪರ ಶುಭ ಕೋರುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.


ಈದ್ ಮಿಲಾದ್ ಅಂಗವಾಗಿ ಹಳೇ ಬಾಗಲಕೋಟೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಹಳೆಯ ಅಂಜುಮನ್ ಸಂಸ್ಥೆ ಆವರಣ ಆರಂಭವಾದ ಮೆರವಣಿಗೆ ವಲ್ಲಭಭಾಯಿ ಸರ್ಕಲ್, ಪಂಕಾ ಮಸೀದ್, ಕಪಡಾ ಬಜಾರ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಶಿವಾನಂದ ಜೀನ್, ತರಕಾರಿ ಮಾರ್ಕೇಟ್ ಮಾರ್ಗವಾಗಿ ಸಾಗಿ ಮುಕ್ತಾಯವಾಯಿತು. ಸಂಜೆ ೭ ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನವನಗರ ಅಂಜುಮನ್ ಆವರಣದಲ್ಲಿ ಜರುಗಿತು. ಮೆರವಣಿಗೆಯಲ್ಲಿ ಯುವಕರು ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದರು. ರಸ್ತೆ ಇಕ್ಕೇಲಗಳಲ್ಲಿ ಸಾರ್ವಜನಿಕರು ನಿಂತು ಮೆರವಣಿಗೆ ವೀಕ್ಷಣೆ ಮಾಡಿದರು.

ಈದ್ ಮಿಲಾದ್ ಅಂಗವಾಗಿ ಹೆಚ್ಚುವರಿ ಡಿಜೆ ಬಳಸಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮಾಜದ ಮುಖಂಡರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ಶಹರ ಪೊಲೀಸ್ ಠಾಣೆಗೆ ತೆರಳಿದ ಮುಖಂಡರು, ಯುವಕರು ೮ ಡಿಜೆಗಳ ಬಳಕೆಗೆ ಅನುಮತಿ ನೀಡಬೇಕು ಎಂದು ಕೋರಿದರು. ವಿಷಯ ತಿಳಿದು ಪೊಲೀಸ್ ಠಾಣೆಗೆ ಆಗಮಿಸಿದ ಎಸ್ಪಿ ಅಮರನಾಥ ರೆಡ್ಡಿ, ಪೊಲೀಸ್ ಇಲಾಖೆಗೆ ಅನುಮತಿಯಂತೆ ಡಿಜೆ ಬಳಸಬೇಕು. ಅನಗತ್ಯ ಗೊಂದಲ ಮಾಡಿಕೊಳ್ಳಬಾರದು ಎಂದು ತಿಳುವಳಿಕೆ ಮೂಡಿಸಿದರು. ಕೊನೆಗೆ ೪ ಡಿಜೆ ಬಳಸಲು ಅವಕಾಶ ದೊರೆಯಿತು. ನಂತರ ಮೆರವಣಿಗೆ ಆರಂಭವಾಯಿತು.