ಬಾಗಲಕೋಟೆ: ಗುಜರಾತ್ ವಿಧಾನ ಸಭೆಯ ಚುನಾವಣೆಯ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷದ ಬಹುಮತದಿಂದ ಗೆದ್ದಿರುವ ಹಿನ್ನಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಜೆ ವಿಜಯೋತ್ಸವ ಆಚರಿಸಿದರು.
ನಗರದ ಬಿಜೆಪಿ ಕಚೇರಿಯಿಂದ ಆರಂಭಗೊಂಡ ವಿಜಯೋತ್ಸವ ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಸಮಾಪ್ತಿಗೊಂಡಿತು. ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರವಾಗಿ ಜೈ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಜನಪರವಾದ ನರೇಂದ್ರ ಮೋದಿಯವರ ಆಡಳಿತ ಶೈಲಿ, ಹಿಂದೆ ಸರ್ಕಾರ ನಡೆಸಿದಂತಹ ಬಿಜೆಪಿ ಮುಖ್ಯಮಂತ್ರಿಗಳು ಮಾಡಿದಂತಹ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಿಜೆಪಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಅಶ್ವಮೇಧ ಕುದರಿಯನ್ನು ಗುಜರಾತ್‌ದಿಂದ ಬಿಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಬಂದು ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಭಾರತೀಯ ಜನತಾ ಪಕ್ಷ ವಿಜಯೋತ್ಸವ ಆಚರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಪಕ್ಷದ ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾಽ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ರೇಖಾ ಕಲಬುರ್ಗಿ, ಮಂಜುಳಾ ಮಿಸ್ಕಿನ್, ನಿರ್ಮಲಾ, ರಾಜು ಗಾಣಿಗೇರ ಇದ್ದರು.