ಬಾಗಲಕೋಟೆ: ಉಗ್ರರ ವಿರುದ್ಧ ಸಮರ ಸಾರಿದ್ದ ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ವತಿಯಿಂದ ಕೋಟೆನಗರಿಯಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಭಾರಿ ಸ್ಪಂದನೆ ವ್ಯಕ್ತವಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನರು ದೇಶ ಭಕ್ತಿ ಘೋಷಣೆ, ಗೀತೆ ಮೊಳಗಿಸಿದರು.
ಇಲ್ಲಿನ ಬಿವಿವಿ ಸಂಘದ ಆವರಣದಲ್ಲಿರುವ ಬೀಳೂರು ಗುರುಬಸವ ದೇವಸ್ಥಾನದಿಂದ ಆರಂಭವಾದ ತಿರಂಗಾ ಯಾತ್ರೆ ಪಶು ಆಸ್ಪತ್ರೆ, ಟೆಂಗಿನಮಠ, ಪೊಲೀಸ ಚೌಕ್, ವಲ್ಲಭಾಯಿ ಚೌಕ್, ಎಂ.ಜಿ.ರಸ್ತೆ ಮೂಲಕ ಬಸವೇಶ್ವರ ವೃತ್ತ ತಲುಪಿ ಸಮಾಪಸ್ತಿಗೊಂಡಿತು. ೩೦೦ ಅಡಿ ಹಾಗೂ ೧೦೦ ಅಡಿ ಉದ್ಧದ ತ್ರೀವರ್ಣ ಧ್ವಜ ಹಿಡಿದು ಸಾಗಿದ್ದು ಆಕರ್ಷಕವಾಗಿತ್ತು, ದೇಶ ಭಕ್ತಿ ಇಮ್ಮಡಿಗೊಳಿಸುವಂತೆ ಮಾಡಿತು.
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಮಾಜಿ ಸೈನಿಕರು, ನಿವೃತ್ತ ಯೋಧರು, ವಕೀಲರು, ರೋಟರಿ ಕ್ಲಬ್ ಸದಸ್ಯರು, ಅಕ್ಕನ ಬಳಗ ಸದಸ್ಯರು, ಸಾವಿರಾರು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಮುಳಗಡೆ ನಗರಿ ಬಾಗಲಕೋಟೆ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸೈನಿಕರ ಶೌರ್ಯ ಗುಣಗಾನ ಮಾಡಲಾಯಿತು. ಬೋಲೋ ಭಾರತ ಮಾತಾಕೀ ಜೈ, ಜೈ ಜವಾನ ಜೈ ಕಿಸಾನ್ ಘೋಷಣೆಗಳು ಆಕಾಶದೆತ್ತರಕ್ಕೆ ಪ್ರತಿಧ್ವನಿಸಿದವು.
ಚರಂತಿಮಠದ ಪ್ರಭು ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಮಾತೆ ಮಾಣಿಕ್ಕೇಶ್ವರಿ ಅಮ್ಮನವರು, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ನಂದು ಗಾಯಕವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.