ಬಾಗಲಕೋಟೆ: ಮುಚಖಂಡಿ ಕ್ರಾಸ್‌ನ ಮಾರುತೇಶ್ವರ ದೇವಸ್ಥಾನದ ಪಂಚಮುಖಿ ಆಂಜನೇಯ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೋಟೆನಗರಿಯಲ್ಲಿ ಭವ್ಯ ಶೋಭಾಯಾತ್ರೆ ಗುರುವಾರ ಅದ್ಧೂರಿಯಾಗಿ ಜರುಗಿತು.
ನಗರದ ಕೊತ್ತಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಶೋಭಾಯಾತ್ರೆಗೆ ಕೆರೂರ ಚರಂತಿಮಠದ ಶ್ರೀಗಳು, ಮಳೇರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಪಂಕಾ ಮಸೀದಿ, ಪೊಲೀಸ್ ಗೇಟ್, ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್, ಕುಮಟಗಿ ಶೋರಂ, ವಾಸವಿ ಟಾಕೀಜ್ , ಮಹಾವೀರ ರೋಡ, ಕೆರೂಡಿ ಆಸ್ಪತ್ರೆ ರೋಡ, ಮುಚಖಂಡಿ ಕ್ರಾಸ್ ರೋಡ ಮೂಲಕ ಮಾರುತೇಶ್ವರ ದೇವಾಲಯಕ್ಕೆ ತಲುಪಿ ಸಮಾಪ್ತಿಗೊಂಡಿತು.
ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಆಂಜನೇಯ ಘೋಷಣೆಗಳು ಮುಗಿಲು ಮುಟ್ಟಿದವು. ಪ್ರಮುಖ ಬೀದಿಗಳಲ್ಲಿ ಕೇಸರಿಧ್ವಜ, ಕಮಾನುಗಳು ರಾರಾಜಿಸಿದವು. ಕಟೌಟ್, ಬ್ಯಾನರಗಳ ಹಬ್ಬದ ಕಳೆ ಸೃಷ್ಟಿಸಿದವು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಬರೆಗಾಲಿನಲ್ಲಿ ಹೆಜ್ಜೆ ಹಾಕಿದ್ದು ಭಕ್ತಿಯ ಪರಾಕಾಷ್ಠೆ ಸಾಕ್ಷಿಕರಿಸಿತು. ಜಾಂಜ್‌ಪತಾಕ್, ಡಿಜೆ, ಮದ್ದಳೆ, ಡೊಳ್ಳು ಕುಣಿತ ಆಕರ್ಷಿಸಿದವು. ಹನುಮನ ವೇಷಧಾರಿಗಳು ಮೆರವಣಿಗೆಯುದ್ದಕ್ಕೂ ಕಲಾ ಪ್ರದರ್ಶನ ನೀಡಿ ರಾಮಾಯಣದ ಐತಿಹ್ಯ ಮೇಲಕು ಹಾಕುವಂತೆ ಮಾಡಿದರು. ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಸಮೀಪಿಸುತ್ತಿದ್ದಂತೆ ಜಯಘೋಷಗಳು ಪ್ರತಿಧ್ವನಿಸಿದವು. ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ಬಾಲಕರು ರಾಮ, ಕೃಷ್ಣ , ಲಕ್ಷಣ, ಸೀತಾದೇವಿ, ಹನುಮನ ವೇಷ ಧರಿಸಿ ಮಿಂಚಿದರು. ಈ ವೇಳೆ ಜಿ.ಪಂ.ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಬಾಯಕ್ಕ ಮೇಟಿ ಭಗವಾಧ್ವಜ ಹಿಡಿದು ಡೊಳ್ಳು ವಾದನಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ವಿಜಯ ಸುಲಾಖೆ, ನಾಗರಾಜ್ ಹದ್ಲಿ, ಸಂಜೀವ ವಾಡಕರ್, ಗಣಪತಿಸಾ ದಾನಿ, ನಾರಾಯಣ ದೇಸಾಯಿ, ಶಿವು ಮೇಲ್ನಾಡ, ರವಿ ಕುಟಮಗಿ, ಎಂ.ಆರ್.ಶಿಂಧೆ, ಅಶೋಕ ಮುತ್ತಿನಮಠ, ಅರುಣ ಲೋಕಾಪೂರ, ಆನಂದ ಜಿಗಜಿನ್ನಿ, ಬಸವರಾಜ ಧರ್ಮಂತಿ, ಕಳಕಪ್ಪ ಬಾದೋಡಗಿ, ರಾಘವೇಂದ್ರ ನಾಗೂರ, ನರೇಂದ್ರ ಕುಪ್ಪಸ್ತ, ಡಾ.ಶೇಖರ ಮಾನೆ, ಗುರು ಅನಗವಾಡಿ, ಶರಣಪ್ಪ ಕೆರೂರ ಸೇರಿದಂತೆ ಇತರರು ಇದ್ದರು.