ಚಿತ್ರದುರ್ಗ: ಆರೋಗ್ಯ ರಕ್ಷಣೆಗೆ ಪರಿಸರ ಮತ್ತು ಮನಸ್ಸುಗಳ ಸ್ವಚ್ಛತೆ ತುಂಬಾ ಅಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ, ಕಸಮುಕ್ತವಾಗಿಸಿ ಕೋಟೆನಗರಿಯ ಸೌಂದರ್ಯ ಕಾಪಾಡಲು ಕೈಜೋಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ್ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆ, ನಗರಸಭೆಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಬೇಕಾದ್ದು, ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಹಸಿ-ಕಸ, ಒಣ-ಕಸ ಪ್ರತ್ಯೇಕಿಸಿ ನಗರಸಭೆ ವಾಹನಗಳಿಗೆ ಹಾಕುವುದರಿಂದ ವಿಲೇವಾರಿ ಮಾಡಲು ಸಹಕಾರಿಯಾಗಲಿದೆ. ಇದರಿಂದ ಪೌರಕಾರ್ಮಿಕರ ಹೊರೆಯೂ ಕಡಿಮೆಯಾಗಲಿದೆ. ಸುಂದರ ನಗರಕ್ಕಾಗಿ ನಿತ್ಯ ಶ್ರಮಿಸುವ ಅವರ ಹಿತ ಕಾಪಾಡಲು ಸಾರ್ವಜನಿಕರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, 15 ದಿನ ನಡೆಯುವ ಈ ಅಭಿಯಾನದಲ್ಲಿ ನಗರ ವ್ಯಾಪ್ತಿಯ ಒಟ್ಟು 140ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯ: ಇದಕ್ಕೂ ಮುನ್ನ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ನಗರಸಭೆಯ ಅಧಿಕಾರಿಗಳು, ಪೌರಕಾರ್ಮಿಕರು ಪೊರಕೆ ಹಿಡಿದು ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಇದೇ ವೇಳೆ ರೋಣ ವಾಸುದೇವ್ ಪ್ರತಿಜ್ಞಾವಿಧಿ ಬೋಧಿಸಿದರು. ನ್ಯಾಯಾಧೀಶರಾದ ಗಂಗಾಧರಪ್ಪ ಚನ್ನಬಸಪ್ಪ ಅಡಪದ್, ಎಂ.ವಿಜಯ್, ಡಿ.ಮಮತಾ, ಎ.ಎಂ.ಚೈತ್ರಾ, ಉಜ್ವಲಾ ವೀರಣ್ಣ ಸಿದ್ಧನವರ್, ರಶ್ಮಿ ಆರ್. ಮರಡಿ, ಅನಿತಾಕುಮಾರಿ, ಆರ್.ಸಹನಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಇತರರಿದ್ದರು.