ಜಿಲ್ಲೆ

ಕೋಟಿ ಜನಕ್ಕೆ ಹೋರಾಟಗಾರರ ಪರಿಚಯ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಸ್ವತಂತ್ರ ಸೇನಾನಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ. ಶಹಾಪುರ ಗೇಟ್ ಬಳಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಉದ್ಯಾನದಲ್ಲಿ ಸೋಮವಾರ ಪ್ರದರ್ಶನ ಆರಂಭಗೊಂಡಿದ್ದು, ಬುಧವಾರದವರೆಗೆ ನಡೆಯಲಿದೆ.

ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅರಿವು ಮೂಡಿಸಲು ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶಾಹೀನ್ ಸಮೂಹ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾತ್ಮ ಗಾಂಧಿ, ಸುಭಾಷ್ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ ಆಜಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ನಾನಾಸಾಹಿಬ್, ಲಾಲಾ ಲಚಪತರಾಯ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಟಿಪ್ಪು ಸುಲ್ತಾನ್, ಹೈದರ್ ಅಲಿ ಸೇರಿ 100 ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ಛಾಯಾಚಿತ್ರಗಳ ಮೇಲೆ ಹೋರಾಟಗಾರರ ಸಂಕ್ಷಿಪ್ತ ಪರಿಚಯವೂ ಇದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಅವರ ವಿಡಿಯೋ ತಯಾರಿಸಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಸಹ ಮಾಡಲಾಗಿದೆ. ಛಾಯಾಚಿತ್ರದ ಮೇಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹೋರಾಟಗಾರರ ಕುರಿತ ವಿಡಿಯೋ ತೆರೆದುಕೊಳ್ಳಲಿದೆ ಎಂದರು.

ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಪಾಲಕರು ಹಾಗೂ ಸಾರ್ವಜನಿಕರು ಆ.10ರವರೆಗೆ ಕಾಲೇಜಿನಲ್ಲಿ ಪ್ರದರ್ಶನ ವೀಕ್ಷಿಸಬಹುದು. ನಂತರ ನಗರದ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳ, ಹೋಟೆಲ್, ಶಾಪಿಂಗ್ ಮಾಲ್ ಗಳಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಸೋಷಿಯಲ್ ಮೀಡಿಯಾ ಸೇರಿ ವಿವಿಧ ಮಾಧ್ಯಮಗಳ ಮೂಲಕ ಒಂದು ಕೋಟಿ ಜನರಿಗೆ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಪರಿಚಯಿಸುವ ಗುರಿ ಇದೆ ಎಂದು ತಿಳಿಸಿದರು.