ಚಿಕ್ಕಬಳ್ಳಾಪುರ: ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳ ಪ್ರತಿಷ್ಠೆಯ ವಿಚಾರವಾಗಿ ಪರಿವರ್ತನೆಯಾಗಿರುವ ಕೋಚಿಮುಲ್ ಇಬ್ಭಾಗಕ್ಕೆ ಮತ್ತೊಂದು ವಿಘ್ನ ಎದುರಾಗಿದ್ದು, ನ್ಯಾಯಾಲಯದಿಂದ ವಿಭಜನೆ ವಿರುದ್ಧವಾಗಿ ತಡೆಯಾಜ್ಞೆ ತರಲಾಗಿದೆ. ರಮೇಶ್ ಕುಮಾರ್, ಕೈ.ವೈ.ನಂಜೇಗೌಡ, ಎನ್.ಎಚ್.ಶಿವಶಂಕರರೆಡ್ಡಿ ಸೇರಿ ಅವಿಭಜಿತ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಒಕ್ಕೂಟದ ಕೆಲ ನಿರ್ದೇಶಕರ ಜತೆಗೆ ಇದು ಕೋಚಿಮುಲ್ ಪ್ರತ್ಯೇಕ ಮಾಡಲು ಸಕಾಲ ಅಲ್ಲ ಎಂಬುದಾಗಿ ಹೇಳುತ್ತಿದ್ದರೆ, ಶತಾಯ ಗತಾಯ ಚಿಮುಲ್ ರಚನೆ ಪಕ್ಕಾ ಎನ್ನುತ್ತಿದ್ದಾರೆ ಸಚಿವ ಡಾ ಕೆ.ಸುಧಾಕರ್. ಈಗಾಗಲೇ ಸಚಿವ ಸಂಪುಟವು ಅನುಮೋದನೆ ನೀಡಿದೆ. ಹಾಗೆಯೇ ವಿಭಜನೆಯ ಪ್ರಕ್ರಿಯೆಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆಯೂ ಆದೇಶ ಹೊರಡಿಸಿದೆ.
ಇದರ ನಡುವೆ ಕೆಲವರು ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ದಾವೆ ಹೂಡಿ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಜನಪ್ರತಿನಿಧಿಗಳ ನಡುವೆ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ನನಗೆ ಸಂಬಂಧವಿಲ್ಲ, ಹಿಂದಿನ ಒಕ್ಕೂಟದ ಆಡಳಿತ ವೈಖರಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಲ್ಲಿನ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಾಗುವುದು. ಇನ್ನು ಜನರ ಅನುಕೂಲಕ್ಕಾಗಿ ಚಿಮುಲ್ ಒಕ್ಕೂಟ ರಚನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ಬೇಕಾದರೆ ಯಾರಾದರೂ ನಿಲ್ಲಿಸಲಿ ನೋಡೋಣ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಸವಾಲೆಸೆದಿದ್ದಾರೆ. ಮತ್ತೊಂದೆಡೆ ಯಾರೋ ಹೈ ಕೋರ್ಟ್‌ನಲ್ಲಿ ಒಕ್ಕೂಟ ಪ್ರತ್ಯೇಕ ವಿಚಾರವಾಗಿ ತಡೆಯಾಜ್ಞೆ ತಂದಿರುವುದಕ್ಕೂ ನನಗೂ ಸಂಬಂಧವಿಲ್ಲ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಾರೆ.
ಒಕ್ಕೂಟ ರಚನೆ ಹಿನ್ನೆಲೆ: ಕಳೆದ 2016ರ ಸೆ.23 ರಂದು ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಸಾಧಕ ಬಾಧಕಗಳ ಚರ್ಚೆಯ ನಡುವೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಘೋಷಿಸಲಾಯಿತು. ಹಾಗೆಯೇ ಈ ಸಂಬಂಧ ಸಲ್ಲಿಸಲು ಸೂಚಿಸಿದ್ದ ಸಾಧ್ಯತಾ ವರದಿಯಿಂದಲೂ ಹೊಸ ತೀರ್ಮಾನದಿಂದ ಅನುಕೂಲ ಎಂಬುದಾಗಿ ಹೇಳಲಾಗಿದೆ.
ಒಕ್ಕೂಟದ ಸಾಮರ್ಥ್ಯ: ಕೋಲಾರ ಒಕ್ಕೂಟದ ವ್ಯಾಪ್ತಿಯಲ್ಲಿ ಬಂಗಾರಪೇಟೆ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ, ಕೋಲಾರ ಸೇರಿ 5 ತಾಲೂಕುಗಳ 913 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 5,13,905 ಲೀಟರ್ ಹಾಲು ಶೇಖರಣೆ. ಚಿಕ್ಕಬಳ್ಳಾಪುರ ಒಕ್ಕೂಟದ ವ್ಯಾಪ್ತಿಯಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ಸೇರಿ 6 ತಾಲೂಕುಗಳ 977 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 4.28 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ಸಚಿವ ಡಾ ಕೆ.ಸುಧಾಕರ್ ಶ್ರಮಿಸುತ್ತಿದ್ದಾರೆ. ಆದರೆ, ಜನರಿಗೆ ಅನುಕೂಲಕರ ಎಂಬುದರ ಅರಿವಿದ್ದರೂ ಕೆಲವರು ದುರುದ್ದೇಶದಿಂದ ವಿರೋಧಿಸುತ್ತಿರುವುದು ದುರದೃಷ್ಟಕರ. ಕೆ.ವಿ.ನಾಗರಾಜ್, ಕೋಚಿಮುಲ್ ಮಾಜಿ ನಿರ್ದೇಶಕ ******** ಕೆಲವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವಿಭಜನೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದರೆ, ಚಿಮುಲ್ ಒಕ್ಕೂಟ ರಚನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಡಾ ಕೆ.ಸುಧಾಕರ್, ಆರೋಗ್ಯ ಸಚಿವ ಸಚಿವ