ಜಿಲ್ಲೆ

ಕೋವಿಡ್​ನೊಂದಿಗೆ ಅಭಿವೃದ್ಧಿಗೆ ಆದ್ಯತೆ

ಹುಬ್ಬಳ್ಳಿ: ಕರೊನಾ ಸೋಂಕು ಹೊಡೆದೋಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಮಳೆಗಾಲ, ಸ್ಮಾರ್ಟ್​ಸಿಟಿ ಹಾಗೂ ಬಿಆರ್​ಟಿಎಸ್ ಯೋಜನೆ ಸೇರಿ ಇತರ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ನಗರದ ಕಿಮ್ಸ್​ಗೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಾಣಿಜ್ಯ ಚಟುವಟಿಕೆ, ಕೈಗಾರಿಕೆಗಳ ಆರಂಭ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಜು. 4ರಂದು ಎಲ್ಲ ಅಧಿಕಾರಿಗಳ ಸಭೆ ಕರೆದಿದ್ದೇನೆ. ಜು. 6ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಭೆ ಕರೆದಿದ್ದಾರೆ. ಸ್ಮಾರ್ಟ್​ಸಿಟಿ ಸೇರಿ ಇತರ ಯೋಜನೆಗಳ ಕುರಿತು ರ್ಚಚಿಸಲಾಗುವುದು ಎಂದರು.

ಕಿಮ್ಸ್​ನಲ್ಲಿ 250 ಬೆಡ್​ಗಳಿವೆ. ರೋಗ ಲಕ್ಷಣರಹಿತ ಸೋಂಕಿತರಿಗೆ ಸಂಜೀವಿನಿ ಆಯುರ್ವೆದ ಕಾಲೇಜ್​ನಲ್ಲಿ 50 ಬೆಡ್​ಗಳನ್ನು ಸಿದ್ಧಗೊಳಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 500 ಹಾಸಿಗೆ ಗುರುತಿಸಿ ಇಡಲಾಗಿದೆ. ಸೋಂಕಿತರ ಪ್ರಮಾಣ ಹೆಚ್ಚಳ ಕಂಡಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸುವ ಕಾರ್ಯ ನಡೆಸಲಾಗುವುದು ಎಂದು ವಿವರಿಸಿದರು. ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜಶೇಖರ ದ್ಯಾಬೇರಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಸಿಎಒ ರಾಜಶ್ರೀ ಜೈನಾಪುರ, ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಕ್ರಾಂತಿಕಿರಣ, ಮಾಜಿ ಅಧ್ಯಕ್ಷ ಡಾ. ಜಿ.ಬಿ. ಸತ್ತೂರ, ಡಾ. ಅಭಯ್ ಮಟ್ಕರ್, ಕಾರ್ಯದರ್ಶಿ ಮಂಜುನಾಥ ನೇಕಾರ, ಇತರರು ಇದ್ದರು.

ಔಪಚಾರಿಕ ಭೇಟಿ: ಕಿಮ್್ಸ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಒದಗಿಸುತ್ತಿರುವ ಸೌಲಭ್ಯ ಕುರಿತು ಜಿಲ್ಲಾಧಿಕಾರಿಯವರು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿಯವರಿಂದ ಮಾಹಿತಿ ಪಡೆದುಕೊಂಡರು. ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಹೊರಗಿನಿಂದಲೇ ವೀಕ್ಷಿಸಿ ಕೆಲ ಮಾಹಿತಿ ಪಡೆದರು. ಇದಕ್ಕೂ ಮೊದಲು ಕರೊನಾ ವಾರ್ಡ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿಯವರು ವೈದ್ಯರ ದಿನಾಚರಣೆ ಪ್ರಯುಕ್ತ ಐಎಂಎ ಪದಾಧಿಕಾರಿಗಳ ಪರವಾಗಿ ಸನ್ಮಾನಿಸಿದರು.

ರೋಗ ಲಕ್ಷಣವಿಲ್ಲದವರನ್ನು ಕೇರ್ ಸೆಂಟರ್​ಗೆ ಸ್ಥಳಾಂತರಿಸಿ: ಕೋವಿಡ್ ರೋಗ ಲಕ್ಷಣ ಇಲ್ಲದ ಪಾಸಿಟಿವ್ ವ್ಯಕ್ತಿಗಳನ್ನು ನಿಯಮಾನುಸಾರ ಕೋವಿಡ್ ಕೇರ್ ಸೆಂಟರ್​ಗಳಿಗೆ ಸ್ಥಳಾಂತರಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಇನ್​ಫ್ಲುಯೆಂಜಾ ನಮೂನೆಯ (ಐಎಲ್​ಐ) ಲಕ್ಷಣಗಳಿರುವವರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿರ್ವಹಣೆಯೇ ಎಲ್ಲ ಇಲಾಖೆಗಳ ಮೊದಲ ಆದ್ಯತೆ. ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳಿವೆ. ರೋಗದ ಲಕ್ಷಣವಿಲ್ಲದ ಪಾಸಿಟಿವ್ ವ್ಯಕ್ತಿಗಳನ್ನು ಕೇರ್ ಸೆಂಟರ್​ಗಳಿಗೆ ಸ್ಥಳಾಂತರಿಸಬೇಕು. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿದ್ದು, ಪ್ರತಿದಿನ ಐಎಲ್​ಐ ಪ್ರಕರಣಗಳ ವರದಿ ನೀಡದ ಆಸ್ಪತ್ರೆಗಳ ನೋಂದಣಿ ಅಮಾನತುಗೊಳಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ಬೇರೆ ಜಿಲ್ಲೆಗಳಿಂದ ಆಗಮಿಸಿ ನೇರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಅವರ ಸ್ಥಳೀಯ ವಿಳಾಸದಲ್ಲಿ ಖುದ್ದಾಗಿ ಮಾಹಿತಿ ಸಂಗ್ರಹಿಸಬೇಕು. ಸೋಂಕು ಹೊಂದಿದ ವ್ಯಕ್ತಿಗಳು ತಮ್ಮ ಊರಿಗೆ ಭೇಟಿ ನೀಡದಿರುವುದು ಖಚಿತಪಟ್ಟರೆ ಆ ಪ್ರದೇಶಕ್ಕೆ ಸೀಲ್​ಡೌನ್​ನಿಂದ ವಿನಾಯಿತಿ ನೀಡಬಹುದು. ಹೋಂ ಕ್ವಾರಂಟೈನ್ ಉಲ್ಲಂಘಿಸುವವರ ಪಟ್ಟಿಯನ್ನು ಪೊಲೀಸರಿಗೆ ಒದಗಿಸಿ ಅವರ ಮೂಲಕ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಕಿಮ್್ಸ ತಜ್ಞ ವೈದ್ಯ ಡಾ. ಲಕ್ಷ್ಮೀಕಾಂತ ಲೋಕರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಕೆ. ಮಾನಕರ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಡಾ. ಶಶಿ ಪಾಟೀಲ, ಡಾ. ಎಸ್.ಎಂ. ಹೊನಕೇರಿ, ಡಾ. ಶಶಿಕಲಾ ನಿಂಬಣ್ಣವರ, ಡಾ. ತನುಜಾ, ಔಷಧ ನಿಯಂತ್ರಣ ಇಲಾಖೆ ಉಪನಿರ್ದೇಶಕ ಕೆ.ಎಸ್. ಮಲ್ಲಿಕಾರ್ಜುನ, ಇತರರು ಇದ್ದರು.

ಅವಳಿ ನಗರದಲ್ಲಿ 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮೀಣ ಪ್ರದೇಶದಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಕನಿಷ್ಠ ಶೇ. 50ರಷ್ಟು ಕಡೆಗಳಲ್ಲಿ ಮೂಗು ಮತ್ತು ಗಂಟಲ ದ್ರವ ಸಂಗ್ರಹಣೆ ಕಾರ್ಯ ಆರಂಭಿಸಬೇಕು. ಗ್ರಾಮೀಣ ಜನರು ತಮ್ಮ ಸಮೀಪದ ಸ್ಥಳಗಳಲ್ಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೌಲಭ್ಯ ಕಲ್ಪಿಸಬೇಕು. | ಡಾ. ಬಿ.ಸಿ. ಸತೀಶ, ಧಾರವಾಡ ಜಿಲ್ಲಾ ಪಂಚಾಯಿತಿ ಸಿಇಒ

ಕ್ವಾರಂಟೈನ್ ಕೇಂದ್ರ, ಕೋವಿಡ್ ಕೇರ್ ಸೆಂಟರ್​ಗಳಿಗೆ ಡಿಸಿ ಭೇಟಿ: ಹುಬ್ಬಳ್ಳಿ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿ, ರಾಜ್​ನಗರದ ಬಿಸಿಎಂ ಹಾಸ್ಟೆಲ್​ನ ಕ್ವಾರಂಟೈನ್ ಕೇಂದ್ರ, ಸಂಜೀವಿನಿ ಆಯುರ್ವೆದ ಕಾಲೇಜ್​ನಲ್ಲಿರುವ ಕೋವಿಡ್ ಸೆಂಟರ್​ಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬುಧವಾರ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದರು.