ಜಿಲ್ಲೆ

ಕೋವಿಡ್ ಹಾಟ್​ಸ್ಪಾಟ್ ಆದೀತು ಜಿಲ್ಲಾ ಆಸ್ಪತ್ರೆ!

ಮಂಜುನಾಥ ಅಂಗಡಿ ಧಾರವಾಡ

ಕೋವಿಡ್ ಹಾಗೂ ಅದರ ರೂಪಾಂತರಿ ಒಮಿಕ್ರಾನ್ ಹರಡುವಿಕೆ ತಡೆಗಾಗಿ ಜಿಲ್ಲಾಡಳಿತ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆದರೆ, ಜಿಲ್ಲಾಡಳಿತದ ಭಾಗವಾಗಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲಾ ಆಸ್ಪತ್ರೆಯು ಕೋವಿಡ್ ಹರಡುವಿಕೆಯ ಹಾಟ್​ಸ್ಪಾಟ್ ಆಗುವ ಲಕ್ಷಣ ಕಾಣುತ್ತಿದೆ.

ಜಿಲ್ಲೆಯ ಬಡವರು, ಮಧ್ಯಮ ವರ್ಗದ ಜನ ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಸಾವಿರಾರು ಜನ ಜಿಲ್ಲಾಸ್ಪತ್ರೆಯಲ್ಲೇ ವಿವಿಧ ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದ್ದು, ಬಹುತೇಕ ವಿಭಾಗಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ ಎಂಬ ಅಭಿಪ್ರಾಯವಿದೆ. ಎಕ್ಸ್​ರೇ, ಸ್ಕಾ್ಯನಿಂಗ್, ಹೆರಿಗೆ ವಿಭಾಗಗಳಲ್ಲಿ ಹೈಟೆಕ್ ವ್ಯವಸ್ಥೆಯ ಅಳವಡಿಕೆಯಿಂದ ನಿತ್ಯವೂ ನೂರಾರು ಜನ ಆಸ್ಪತ್ರೆಗೆ ತೆರಳುತ್ತಾರೆ.

ಹೊರರೋಗಿಗಳ ವಿಭಾಗದಲ್ಲಿ 5 ಕೌಂಟರ್​ಗಳಿದ್ದು, ಬೆಳಗ್ಗೆ 8 ಗಂಟೆಯಿಂದ ಕಾರ್ಯನಿರ್ವಹಿಸುತ್ತವೆ. ಇಲ್ಲಿ ಪುರುಷರು, ಮಹಿಳೆಯರು, ಬಿಲ್ಲಿಂಗ್, ಹಿರಿಯ ನಾಗರಿಕರು ಹಾಗೂ ತುರ್ತು ಚಿಕಿತ್ಸೆ ಎಂಬ ಕೌಂಟರ್​ಗಳಿವೆ. ನೂರಾರು ಜನ ಸರದಿಯಲ್ಲಿ ನಿಂತು ನೋಂದಣಿ ಮಾಡಿಸಿಕೊಂಡು ಸಂಬಂಧಪಟ್ಟ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಆದರೆ, ಒಪಿಡಿ ಕೌಂಟರ್​ಗಳಲ್ಲಿ ಮೇಲುಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಇಲ್ಲ. ನೋಂದಣಿಗೆ ಮುಗಿಬೀಳುವ ಹೊರರೋಗಿಗಳು ಪರಸ್ಪರ ಅಂತರ ಕಾಪಾಡುತ್ತಿಲ್ಲ. ಅಲ್ಲದೆ, ಮಾಸ್ಕ್ ಧರಿಸದಿದ್ದರೂ ಇಲ್ಲಿ ಕೇಳುವವರಿಲ್ಲದಂತಾಗಿದೆ.

ಮಾಸ್ಕ್ ಹಾಕದಿದ್ದರೂ ಪ್ರವೇಶ

ಆಸ್ಪತ್ರೆಯ ಅಲ್ಲಲ್ಲಿ ಮಾಸ್ಕ್ ಇಲ್ಲದವರಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಈ ನಿಯಮ ನಾಮಕಾವಾಸ್ತೆ ಎನ್ನುವಂತಾಗಿದೆ. ಮಾಸ್ಕ್ ಧರಿಸದೆ ಆಸ್ಪತ್ರೆಯ ಎಲ್ಲೆಂದರಲ್ಲಿ ಸುತ್ತಾಡಿದರೂ ಕೇಳುವವರಿಲ್ಲ. ಒಂದೆಡೆ ಕರೊನಾ, ಒಮಿಕ್ರಾನ್ ಬಗ್ಗೆ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ತಮ್ಮ ಕಟ್ಟಡದಲ್ಲಿ ರೋಗ ವ್ಯಾಪಕವಾಗಿ ಹರಡುವ ಭೀತಿ ಇದ್ದರೂ ಗಮನಿಸುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.