ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮನೆಮನೆ ಪ್ರಚಾರಕ್ಕೆ ಹೋಗುವವರು ಕೋವಿಡ್ ಸುರಕ್ಷತಾ ನಿಯಮಾವಳಿ ಅನುಸರಿಸದಿದ್ದರೆ ಅಂಥವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಹೇಳಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಂದಾಯ, ಪೊಲೀಸ್, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಸರ್ಕಾರ ಮುನ್ನೆಚ್ಚರಿಕೆಯಿಂದ ಈ ನಿರ್ಣಯ ಕೈಗೊಂಡಿದೆ ಎಂದರು.
ಆಸೆ, ಆಮಿಷ, ಒತ್ತಾಯದಿಂದ ಅವಿರೋಧ ಆಯ್ಕೆ ನಡೆಯುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಇಂಥ ಘಟನೆಗಳ ಸತ್ಯಾಸತ್ಯತೆ ಸಾಬೀತಾದರೆ ಕಠಿಣ ಕ್ರಮವಹಿಸಲಾಗುವುದು. ಜತೆ, ಚುನಾವಣಾ ಆಯೋಗಕ್ಕೂ ವರದಿ ನೀಡಲಾಗುವುದು ಎಂದರು.
ಜನಸಾಮಾನ್ಯರ ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಚುನಾವಣೆಗಳು ನಡೆಯುತ್ತವೆ. ಜನರ ಧ್ವನಿಗೆ ಧ್ವನಿಯಾಗುವ ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿಯೇ ಮತದಾರರು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಮತದಾನ ಬಹಿಷ್ಕಾರಕ್ಕೆ ಮುಂದಾಗುವವರು ಈ ಬಗ್ಗೆ ಯೋಚಿಸಬೇಕು ಎಂದರು. ನಾಮಪತ್ರ ಸಲ್ಲಿಕೆ, ವಾಪಸಾತಿಗೆ ಸಮಸ್ಯೆ ಆಗುವ ಸನ್ನಿವೇಶವಿದೆ. ಅಂಥ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಂದೂಕು ಜಮೆ ಇಡಲು ಸೂಚಿಸಲಾಗಿದೆ. ಉಳಿದೆಡೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.ಈ ವೇಳೆ ಪ್ರಭಾರಿ ಉಪವಿಭಾಗಾಧಿಕಾರಿ ಅಜಿತ ರೈ, ಡಿಎಸ್ಪಿ ರವಿ ನಾಯ್ಕ, ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಹಾಗೂ ಇತರರಿದ್ದರು.
ಸಮಸ್ಯೆಗೆ ಪರಿಹಾರವಲ್ಲ ಬಹಿಷ್ಕಾರ
ಚುನಾವಣೆ ಬಹಿಷ್ಕಾರ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹೇಳಿದರು. ಸಿದ್ದಾಪುರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ವಿವಿಧೆಡೆ ಗ್ರಾಪಂ ಚುನಾವಣೆ ಬಹಿಷ್ಕಾರದ ಮಾಹಿತಿ ಬರುತ್ತಿದೆ. ನಮಗೆ ಬೇಕಾದ ಶಾಸನಗಳನ್ನು ಹಾಗೂ ಕೆಲಸಗಳನ್ನು ಮಾಡಿಕೊಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಚುನಾವಣೆ ಬಹಿಷ್ಕರಿಸದೇ ಉತ್ತಮರನ್ನು ಆಯ್ಕೆ ಮಾಡಿಕೊಂಡರೆ ನಮಗೆ ಬೇಕಾದಂತೆ ಸೌಲಭ್ಯ ಪಡೆಯಬಹುದು ಎಂದರು. ಚುನಾವಣೆಯ ಸಂದಂರ್ಭದಲ್ಲಿ ಅಧಿಕಾರಿಗಳೂ ಯಾವುದೆ ಭರವಸೆಗಳನ್ನು ನೀಡುಲು ಸಾಧ್ಯವಿಲ್ಲ. ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದರೂ ನಮ್ಮ ಅಧಿಕಾರಿಗಳು ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, ಮಾತುಕತೆ ನಡೆಸಿದ್ದಾರೆ ಎಂದರು. ತಹಸೀಲ್ದಾರ್ ಮಂಜುಳಾ ಭಜಂತ್ರಿ ಇದ್ದರು.