ಹಿರೇಕೆರೂರ: ಕರೊನಾ ವೈರಸ್ ಸೋಂಕಿತರು ಯಾವುದೇ ಸಂದರ್ಭದಲ್ಲಿ ಧೃತಿಗೆಡದಂತೆ ತೀವ್ರ ನಿಗಾ ವಹಿಸಿ, ಅವರಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಉಪಚಾರ ಮಾಡಬೇಕು ಎಂದು ವೈದ್ಯರು ಹಾಗೂ ಸಿಬ್ಬಂದಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್- 19 ವಾರ್ಡ್ಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಕರೊನಾ ವೈರಸ್ ಸೋಂಕಿತರು, ವಿವಿಧ ರೋಗಿಗಳ ಚಿಕಿತ್ಸೆಗೆ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕರೊನಾ ವೈರಸ್ ವಾರ್ಡ್ನ ಸುತ್ತಲೂ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್, ತಾಲೂಕು ಆರೋಗ್ಯಾಧಿಕಾರಿ ಡಾ.ಜೆಡ್.ಆರ್. ಮಕಾಂದಾರ, ವೈದ್ಯಾಧಿಕಾರಿ ಡಾ.ಹೊನ್ನಪ್ಪ ಜೆ.ಎಂ, ಡಾ.ಶ್ರೀಕಾಂತ ಆಚಾರ್ಯ, ಸಂತೋಷ ಭಜಂತ್ರಿ ಇದ್ದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರು ಸೋಮವಾರ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಕ್ವಾರಂಟೈನ್ ಕೇಂದ್ರಗಳ ಸಿದ್ಧತೆ, ತಾಲೂಕು ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಹಾನಗಲ್ಲ ತಾಲೂಕು ಆಸ್ಪತ್ರೆ, ಅಕ್ಕಿಆಲೂರಿನ ಆಸ್ಪತ್ರೆ, ಹಿರೇಕೆರೂರಿನ ದೂದಿಹಳ್ಳಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಸಿದ್ಧತೆ ಮಾಡಿರುವ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ, ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳು, ಹಾಸಿಗೆ ಸೌಲಭ್ಯ, ಐಸೋಲೇಷನ್ ವಾರ್ಡ್ಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ, ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರ್ಗಳು, ಕ್ವಾರಂಟೈನ್ ಕೇಂದ್ರಗಳ ಉಸ್ತುವಾರಿ ಅಧಿಕಾರಿ ಚೈತ್ರಾ ಇತರರಿದ್ದರು.